ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯೋಗಿಗಳು ಬಡ್ತಿ ಪಡೆದುಕೊಳ್ಳುವುದು ಮೂಲಭೂತ ಹಕ್ಕಲ್ಲ. ಮತ್ತು ಈ ವಿಚಾರದಲ್ಲಿ ಸರ್ಕಾರವನ್ನು ಮೀಸಲು ನೀಡಲೇಬೇಕೆಂದು ಒತ್ತಾಯಿಸಲು ಬರುವುದಿಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು ಇದೀಗ ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಮೀಸಲು ತೀರ್ಪು ಗದ್ದಲ: ಕಾನೂನು ತಜ್ಞರ ಸ್ಪಷ್ಟನೆ
ಮೀಸಲು ವಿಚಾರವಾಗಿ ಸುಪ್ರೀಂ ನೀಡಿದ ತೀರ್ಪಿನ ಬಗ್ಗೆ ಹೈಕೋರ್ಟ್ ಹಿರಿಯ ವಕೀಲ ಲಕ್ಷ್ಮೀನಾರಾಯಣ ವಿಶ್ಲೇಷಣೆ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಹಿಂದಿನ ನಿರ್ಣಯಗಳು ಮತ್ತು ಸಂವಿಧಾನದಲ್ಲಿರುವ ಕಾನೂನಾತ್ಮಕ ಅಂಶಗಳ ಮೇಲೆ ತೀರ್ಪು ನೀಡಿರುವುದಾಗಿ ಸ್ಪಷ್ಟವಾಗಿ ಹೇಳಿದೆ. ಹಾಗಿದ್ದೂ ಸುಪ್ರೀಂಕೋರ್ಟ್ ತೀರ್ಪನ್ನು ತಮ್ಮದೇ ವ್ಯಾಪ್ತಿಯಲ್ಲಿ ಅರ್ಥೈಸುತ್ತಿರುವ ರಾಜಕೀಯ ನಾಯಕರು ಭಿನ್ನ ಅಭಿಪ್ರಾಯಗಳ ಮೇಲೆ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸುತ್ತಿವೆ. ರಾಷ್ಟ್ರೀಯ ನಾಯಕರ ಹಾದಿಯಲ್ಲೇ ರಾಜ್ಯದ ನಾಯಕರು ಬಿಜೆಪಿ ಪಕ್ಷದ ವಿರುದ್ಧ ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರು ಅಲ್ಲಲ್ಲಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ
ಅಂತೆಯೇ, ರಾಜ್ಯ ಹೈಕೋರ್ಟ್ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಲಕ್ಷ್ಮೀನಾರಾಯಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ವಿವರಣೆ ನೀಡಿದ್ದಾರೆ."ಉದ್ಯೋಗಕ್ಕೆ ಸಂಬಂಧಿಸಿದ ಮೀಸಲು ಸರ್ಕಾರಗಳು ನೀಡುತ್ತಿರುವ ಸೌಲಭ್ಯ ಅಲ್ಲ. ಈ ಹಕ್ಕನ್ನು ಸಂವಿಧಾನವೇ ನೀಡಿದೆ. ಆದರೆ, ಈ ಹಕ್ಕನ್ನು ಹೇಗೆ ಮತ್ತು ಎಷ್ಟು ಕೊಡಬೇಕು ಅಥವಾ ಕೊಡಬಾರದು ಎಂಬುದನ್ನು ನಿರ್ಧರಿಸುವ ವಿವೇಚನಾಧಿಕಾರವನ್ನು ಸರ್ಕಾರಗಳಿಗೆ ಬಿಡಲಾಗಿದೆ. ಅದರಂತೆ ದೇಶದಲ್ಲಿ ಕೆಲವೊಂದು ರಾಜ್ಯಗಳು ಮೀಸಲು ಸೌಲಭ್ಯ ನೀಡಿವೆ. ಕೆಲವೊಂದು ರಾಜ್ಯಗಳು ಕೊಟ್ಟಿಲ್ಲ. ಅದೇ ರೀತಿ, ಉತ್ತರಾಖಂಡ ರಾಜ್ಯದಲ್ಲಿ ಬಡ್ತಿ ಮೀಸಲು ಕೊಟ್ಟಿಲ್ಲ.""ಯಾವುದೇ ರಾಜ್ಯದಲ್ಲಿ ಮೀಸಲು ಸೌಲಭ್ಯ ಕೊಟ್ಟಾಗ ಮಾತ್ರ ಅಲ್ಲಿ ಮೀಸಲು ಮೂಲಭೂತ ಹಕ್ಕಾಗುತ್ತದೆಯೇ ವಿನಃ ಕೊಡದೇ ಆಗುವುದಿಲ್ಲ. ನಮ್ಮ ರಾಜ್ಯದಲ್ಲಿ ಹಿಂದಿನಿಂದಲೂ ಮೀಸಲು ಕೊಡಲಾಗಿದೆ. 2012 ರಲ್ಲಿ ನಮ್ಮಲ್ಲಿ ಕೂಡ ಇಂತಹ ಪ್ರಕರಣ ಎದುರಾಗಿತ್ತು. ಪವಿತ್ರಾ ವರ್ಸಸ್ ಸ್ಟೇಟ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೀಸಲು ವಿಚಾರದಲ್ಲಿ ಸ್ಪಷ್ಟ ನಿರ್ಣಯ ಕೊಟ್ಟಿದೆ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪು ರಾಜ್ಯದ ಮೀಸಲು ಸೌಲಭ್ಯದ ಮೇಲೆ ಪರಿಣಾಮ ಬೀರುವುದಿಲ್ಲ."ಸರ್ಕಾರಗಳು ಅಗತ್ಯ ಪ್ರಮಾಣದಲ್ಲಿ ಮೀಸಲು ಸೌಲಭ್ಯ ಕಲ್ಪಿಸುವುದು ಅವುಗಳ ಜವಾಬ್ದಾರಿ. ಆದರೆ, ಅದಕ್ಕೂ ಒಂದು ಮಿತಿ ಇದೆ. ಸಂವಿಧಾನದ ಆಶಯಗಳಂತೆ ಅವುಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ವಿವೇಚನಾಧಿಕಾರವಿದೆ. ವಿಪಕ್ಷಗಳು ಆರೋಪಿಸುವಂತೆ ಮೋದಿ ಸರ್ಕಾರ ಮೀಸಲು ವಾಪಸ್ ಪಡೆಯುವ ಯಾವುದೇ ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಒಂದು ವೇಳೆ, ಮೀಸಲು ಬದಲಾವಣೆ ಮಾಡುವುದೇ ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದಲ್ಲಿ ಮಾತ್ರ ಸಾಧ್ಯ" ಎಂದು ಹಿರಿಯ ವಕೀಲ ಲಕ್ಷ್ಮೀನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.