ಬೆಂಗಳೂರು: ಭಗವದ್ಗೀತೆಯನ್ನು ಮೊದಲು ಬರೆದಿದ್ದು ಹಾಗೂ ಮಹಾಭಾರತವನ್ನು ಮಟ್ಟ ಮೊದಲಬಾರಿಗೆ ಲಿಪಿಬದ್ಧಗೊಳಿಸಿದ್ದು ಗಣಪತಿ ಎಂದು ಪುತ್ತಿಗೆಮಠದ ಸುಗುಣೇಂದ್ರ ತೀರ್ಥರು ತಿಳಿಸಿದರು. ಜೋಶಿ ಸಂಗೀತ ನೃತ್ಯ ನಾಟಕ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಮಣ್ಣಿನ ಗಣಪ ಮಾಡುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವೆಲ್ಲರೂ ಮಣ್ಣಿನ ಗಣಪತಿಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಅದರ ಜೊತೆಗೆ ಕೋಟಿ ಗೀತಲೇಖನ ಯಜ್ಞವನ್ನು ಮಾಡಬೇಕು. ಯಾಕೆಂದರೆ ಕೋಟಿ ಗೀತಾಲೇಖನ ಯಜ್ಞವನ್ನು ಮೊದಲು ಮಾಡಿದ್ದು ಗಣಪತಿ. ಆದ್ದರಿಂದ ಗಣಪತಿಗೂ ಕೋಟಿ ಗೀತಾಲೇಖನ ಯಜ್ಞಕ್ಕೂ ನಿಖಟವಾದ ಸಂಬಂಧವಿದೆ. ಆದ್ದರಿಂದ ಗಣಪತಿಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಭಗವದ್ಗೀತೆಯನ್ನು ಬರೆಯುವುದುರಿಂದ ಕೃಷ್ಣ ಹಾಗೂ ಗಣಪತಿ ಇಬ್ಬರ ಅನುಗ್ರಹವು ದೊರೆಯುತ್ತದೆ ಎಂದರು.
ಇನ್ನೊಂದೆಡೆ ಕೃಷ್ಣನಿಗೆ ಗೀತೆ ಎಂದರೆ ತುಂಬಾ ಇಷ್ಟ, ಯಾರು ಕೃಷ್ಣನ ಗೀತೆಯನ್ನು ಬರೆಯುತ್ತಾರೆ ಹಾಗೂ ಓದುತ್ತಾರೊ ಅವರಿಗೆ ಅವರ ಇಷ್ಟಾರ್ಥಗಳನ್ನು ಶ್ರೀ ಕೃಷ್ಣ ಅನುಗ್ರಹಿಸುತ್ತಾನೆ. ಆದ್ದರಿಂದ ನಾವೆಲ್ಲರು ಭಾಗವದ್ಗೀತೆಯನ್ನು ಬರೆದು ಕೃಷ್ಣನಿಗೆ ಅರ್ಪಿಸಿದಾಗ ನಮ್ಮ ಸಂಕಲ್ಪ ಪೂರ್ಣವಾಗುತ್ತದೆ. ಮುಂಬರುವ ಜನವರಿ 18 ರಿಂದ 4 ತಿಂಗಳ ನಂತರ ಉಡುಪಿಯಲ್ಲಿ ನಮ್ಮ ಪರ್ಯಾಯ ನಡೆಯಲಿದೆ. ಅದರ ಅಂಗವಾಗಿ 1 ಕೋಟಿ ಜನರಿಂದ ಭಗವದ್ಗೀತೆಯನ್ನು ಬರೆಸಿ ಉಡುಪಿಯ ಶ್ರೀ ಕೃಷ್ಣನಿಗೆ ಅರ್ಪಿಸಬೇಕು ಎಂಬ ಸಂಕಲ್ಪವನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಗಣೇಶ ಚತುರ್ಥಿ ದಿನದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ:ಸೋಮವಾರದಂದು " ಗಣೇಶ ಚತುರ್ಥಿ" ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ತಿಳಿಸಿದ್ದಾರೆ.