ಬೆಂಗಳೂರು:ರಾಜ್ಯ ಹಾಗೂ ಕೇಂದ್ರದ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಸಾಧನೆಯ ವಿಡಿಯೋವೊಂದನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಇನ್ನೇನು ಉದ್ಘಾಟನೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಮಿಸಿ ರಸ್ತೆ ಸಂಚಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ತೆರಳಿದ್ದರು. ಇದೇ ರಸ್ತೆಯ ವಿಚಾರವಾಗಿ ಸಚಿವ ಸುಧಾಕರ್ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರದ ಜೊತೆ ಜೊತೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡ ಹಾದು ಹೋಗಿರುವುದು ಕಾಣುತ್ತದೆ. ಸಂಸದ ಪ್ರತಾಪ್ ಸಿಂಹ ಅವರೂ ಕೂಡಾ ನಿತ್ಯವೂ ಒಂದಲ್ಲೊಂದು ಚಿತ್ರದ ಮೂಲಕ ಈ ಹೆದ್ದಾರಿಯ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಆರೋಗ್ಯ ಸಚಿವ ಕೆ.ಸುಧಾಕರ್ ಇದೀಗ ವಿಶಿಷ್ಟ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಡ್ರೋನ್ ಕ್ಯಾಮೆರಾದಿಂದ ದೃಶ್ಯ ಸೆರೆ ಹಿಡಿಯಲಾಗಿದೆ. ಇದು ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳ ಸಾಧನೆ ಎಂದು ಸಚಿವರು ಶೀರ್ಷಿಕೆ ಬರೆದಿದ್ದಾರೆ.
ಡಾ.ಸುಧಾಕರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, "10 ಪಥಗಳ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ಒಂದೇ ಚೌಕಟ್ಟಿನಲ್ಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳು ಅಭೂತಪೂರ್ವ ವೇಗದಲ್ಲಿ ಮುಂದಿನ ಪೀಳಿಗೆಗೆ ಮೂಲ ಸೌಕರ್ಯಗಳನ್ನು ಒದಗಿಸಿವೆ" ಎಂದು ತಿಳಿಸಿದ್ದಾರೆ.
8,453 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಕೆಂಗೇರಿಯಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇ ಮೂಲಕ ತೆರಳಲು ಇದುವರೆಗೆ ಮೂರುವರೆ ಗಂಟೆ ಕಾಲ ಬೇಕಾಗಿತ್ತು. ಆದರೆ, ಈಗ ಸಿದ್ಧವಾಗಿರುವ ಎಕ್ಸ್‌ಪ್ರೆಸ್ ವೇ ಮೂಲಕ ಕೇವಲ ಒಂದೂವರೆ ಗಂಟೆಯಲ್ಲಿ ಕ್ರಮಿಸಬಹುದು.