ಬೆಂಗಳೂರು:ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಟೆಂಡರ್ ಶ್ಯೂರ್ ಅಡಿ 35,000 ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ಆಗಿದೆ ಎಂದು ಡಾಕ್ಟರ್ ಕೆ ಸುಧಾಕರ್ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ. ಕೆ ಸುಧಾಕರ್ ಹಣದ ಆಸೆ ಹಾಗೂ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿ ಸೇರಿ ಮಂತ್ರಿಯಾಗಿದ್ದಾರೆ. ಭ್ರಷ್ಟಾಚಾರ ಮಾಡುವ ಅಲಿಬಾಬಾ 40 ಕಳ್ಳರ ಗುಂಪಲ್ಲಿ ಇವನೂ ಒಬ್ಬ ಸದಸ್ಯ. ಇವರು ಏನೆಲ್ಲಾ ಮಾಡಿದ್ದಾರೆ ಅನ್ನೋದರ ಸಂಬಂಧ ಎಚ್.ಕೆ. ಪಾಟೀಲ್ ನೇತೃತ್ವದ ಪಬ್ಲಿಕ್ ಅಪೇರ್ಸ್ ಕಮಿಟಿ ವರದಿ ನೀಡಿದೆ.
ಕೋವಿಡ್ ಸಂದರ್ಭದಲ್ಲಿ 3 ಸಾವಿರ ಕೋಟಿ ಅಕ್ರಮ ಆಗಿದೆ ಎಂದಿದ್ದಾರೆ. ಇದರ ತನಿಖೆ ಆಗಿಲ್ಲ. ಸ್ಪೀಕರ್ ಕಾಗೇರಿ ತಾವಿನ್ನೂ ಆರ್ಎಸ್ಎಸ್ನವರು ಅಂತಲೇ ಅಂದುಕೊಂಡಿದ್ದಾರೆ. ಮರುಪರಿಶೀಲನೆ ನಡೆಸುವಂತೆ ತಿಳಿಸಿದರೂ ನಿರ್ಲಕ್ಷ್ಯ ಮಾಡಲಾಗಿದೆ. ಇಲ್ಲಿ ಲಂಚ, ಅವ್ಯವಹಾರ ನಡೆದಿಲ್ಲ ಅಂದರೆ ವಿಶೇಷ ಆಡಿಟ್ ನಡೆಸಬಹುದಿತ್ತು. ಯಾಕೆ ಬಿಜೆಪಿ ಹಿಂದೇಟು ಹಾಕಿದೆ. ಲೆಕ್ಕ ಪರಿಶೀಲನೆಗೆ ಸರ್ಕಾರ ಯಾಕೆ ಒಪ್ಪಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಸುಳ್ಳಿನ ಕಾರ್ಖಾನೆ: ಇವರು ಎಂಎಲ್ಎಸಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಂಬುವರನ್ನು ಸುಳ್ಳು ಹೇಳುವುದಕ್ಕೇ ಇರಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ತಾಳೆ ಆಗದ ಲೆಕ್ಕದ ವಿವರವನ್ನು ನೀಡುತ್ತಿದ್ದೇನೆ. ಸುಳ್ಳು ಹೇಳಿ ಜನರಿಗೆ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡುವುದು ಉದ್ದೇಶ. ನನ್ನನ್ನು ಕಂಡರೆ ಹೆದರಿಕೆ. ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನ ಕೈಗೊಂಬೆ.
ಲಂಚ ಹೊಡೆಯುವ ಗಿರಾಕಿಗಳಿಗೆ ಸಿಎಜಿ ವರದಿ ಓದಲು ಸಮಯ ಇಲ್ಲ. ರವಿಕುಮಾರ್ ನೀಡಿದ ತಪ್ಪು ಮಾಹಿತಿಯನ್ನು ಜನರಿಗೆ ನೀಡುವ ಕೆಲಸ ಮಾಡಿದ್ದಾನೆ. ಇವರ ಆರ್ಥಿಕ ಅಶಿಸ್ತು ಇದು. ಅವ್ಯವಹಾರ ಅಂತ ಬಿಂಬಿಸಲಾಗಿದೆ. ಜನರಿಗೆ ತಪ್ಪು ಮಾಹಿತಿ ತಲುಪಬಾರದು. 13 ಸಾರಿ ವ್ಯವಸ್ಥಿತ ಆರ್ಥಿಕ ಶಿಸ್ತಿನ ಬಜೆಟ್ ಮಂಡಿಸಿದ್ದು, ಈ ಸಿದ್ದರಾಮಯ್ಯ. ಬಿಜೆಪಿ ಸರ್ಕಾರದಲ್ಲಿ ಇದು ಆಗಿಲ್ಲ. ಭ್ರಷ್ಟ ವ್ಯವಸ್ಥೆ ಮುಂದುವರಿಸಿಕೊಂಡು ಸಾಗಿದ್ದಾರೆ. ಸಾಲ ಮಾಡುವುದು ತಪ್ಪಲ್ಲ. ಒಂದು ಮಿತಿಯಲ್ಲಿ ಎಲ್ಲವೂ ಆಗಬೇಕು ಎಂದರು.
ಸಮಿತಿ ಮಾಡಿ ತನಿಖೆ ನಡೆಸಿ: ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುವ ಕಾರ್ಯವನ್ನು ನಾನು ಮಾಡಿಲ್ಲ. ಬಿಜೆಪಿ ಸರ್ಕಾರ ಮಾಡಿದೆ. ನಾಲ್ಕು ವರ್ಷದಲ್ಲಿ ಮೂರು ಲಕ್ಷ ಕೋಟಿ ರೂ. ಮೊತ್ತದ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರ ಸಹ ಅದೇ ಕೆಲಸ ಮಾಡಿದೆ. ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದು, ಆರ್ಥಿಕ ಶಿಸ್ತು ಹಾಳಾಗಿದೆ. ಈಗ ನಮ್ಮ ಅವಧಿಯಲ್ಲಿ ನಡೆದದ್ದು ಅವ್ಯವಹಾರ ಅಲ್ಲ. ಅದನ್ನು ಹಾಗಂತ ಲೋಕಾಯುಕ್ತಕ್ಕೆ ದೂರು ನೀಡಿದ್ದು ತಪ್ಪು.