ಬೆಂಗಳೂರು:ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 94ನೇ ಸ್ಥಾನ ಪಡೆದಿದ್ದು, ಈ ಮೂಲಕ ಜಾಗತಿಕವಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಿಗಿಂತಲೂ ಕೆಳಸ್ಥಾನ ಪಡೆದಿದೆ. ಇದು ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಭಾರತಕ್ಕೆ ಜಾಗತಿಕವಾಗಿ ಕಪ್ಪು ಚುಕ್ಕೆಯಾದಂತಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯವು ಹಸಿವು ಹಾಗೂ ಅಪೌಷ್ಟಿಕತೆಯಲ್ಲಿ ಯಾವ ಹಂತದಲ್ಲಿದೆ ಎಂಬುದನ್ನು ನೋಡುವುದು ಅಷ್ಟೇ ಮುಖ್ಯವಾಗಿದೆ.
ಕರ್ನಾಟಕವು ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಪರ ರಾಜ್ಯವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಯಾವತ್ತೂ ಉತ್ತಮ ಸ್ಥಾನದಲ್ಲೇ ಇರುತ್ತದೆ. ಆದರೆ, ನೀತಿ ಆಯೋಗ 2019ರಲ್ಲಿ ಬಿಡುಗಡೆ ಮಾಡಿದ ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಕಳಪೆ ಪ್ರದರ್ಶನ ತೋರಿದೆ.
ನೀತಿ ಆಯೋಗದ ಎಸ್ಡಿಜಿ ಸೂಚ್ಯಂಕದ ಪ್ರಕಾರ ಕರ್ನಾಟಕವು ಹಸಿವು, ಬಡತನ ಹಾಗೂ ಗುಣಮಟ್ಟದ ಶಿಕ್ಷಣದಲ್ಲಿ ಇಳಿಕೆ ಕಂಡಿದೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಕರ್ನಾಟಕ ಸ್ಥಾನ ಮತ್ತೆ ಕುಸಿತ ಕಂಡಿದ್ದು, ಅದರಂತೆ ಕರ್ನಾಟಕ 66 ಅಂಕ ಪಡೆದಿದೆ. ಅದರಲ್ಲೂ ಹಸಿವು ರಹಿತ ಸೂಚ್ಯಂಕದಲ್ಲಿ ಕರ್ನಾಟಕ 2019ರ ಅಂಕಿ ಅಂಶದಂತೆ 17 ಅಂಕದಷ್ಟು ಭಾರೀ ಕುಸಿತ ಕಂಡು ಕಳಪೆ ಪ್ರದರ್ಶನ ತೋರಿದೆ. ಅದೇ ರೀತಿ ಬಡತನ ಸೂಚ್ಯಂಕದಲ್ಲಿ 3 ಅಂಕ ಕುಸಿತ ಕಂಡಿದೆ. ನೀತಿ ಆಯೋಗದ ಈ ಸೂಚ್ಯಂಕದ ಬಗ್ಗೆ ರಾಜ್ಯ ಸರ್ಕಾರ ತನ್ನ ಆಕ್ಷೇಪ ವ್ಯಕ್ತಪಡಿಸಿದ್ದು, ಈ ದತ್ತಾಂಶ ತಪ್ಪಾಗಿದ್ದು ಸರಿಯಾದ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಕೊರೊನಾ ಸಂದರ್ಭದಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಹೆಚ್ಚಿರುವುದರಿಂದ ಹಸಿವಿನ ಪ್ರಮಾಣವೂ ವೃದ್ಧಿಯಾಗಿರುವ ಸಾಧ್ಯತೆ ಇದೆ. ಕಾರಣ ಲಾಕ್‌ಡೌನ್ ವೇಳೆ ಸರ್ಕಾರ ಉಚಿತ ಪಡಿತರ, ಆಹಾರ ಪೂರೈಕೆ ಮಾಡಿದ್ದರೂ ಅದು ಎಲ್ಲರಿಗೂ ತಲುಪಿರುವುದು ಅನುಮಾನ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇಂದಿರಾ ಕ್ಯಾಂಟಿನ್ ಮೂಲಕ ವಲಸೆ ಕಾರ್ಮಿಕರು ಹಾಗೂ ಬಡವರ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡಲಾಗಿತ್ತು.