ಬೆಂಗಳೂರು : ತೆಲಂಗಾಣ ಕಾಂಗ್ರೆಸ್ ಭರ್ಜರಿ ಗೆಲುವಿನ ಬಳಿಕ ಇದೀಗ ಸರ್ಕಾರ ರಚನೆಯ ಕಸರತ್ತು ಆರಂಭಿಸಿದೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದಾರೆ.
ಆಡಳಿತಾರೂಢ ಬಿಆರ್ಎಸ್ ಗೆ ಸೋಲಿನ ರುಚಿ ತೋರಿಸುವ ಮೂಲಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಇತ್ತ ತೆಲಂಗಾಣದ ಗೆಲುವಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಪಾತ್ರವೇ ಹೆಚ್ಚು. ಬಹುತೇಕ ಎಲ್ಲಾ ಸಚಿವರು ಮತ್ತು ಶಾಸಕರಿಗೆ ತೆಲಂಗಾಣ ಚುನಾವಣೆಯ ಕ್ಷೇತ್ರವಾರು ಹೊಣೆಗಾರಿಕೆ ನೀಡಲಾಗಿತ್ತು. ರಾಜ್ಯದಲ್ಲಿನ ಪಂಚ ಗ್ಯಾರಂಟಿ ಮಾದರಿಯಲ್ಲೇ ಕಾಂಗ್ರೆಸ್ ತೆಲಂಗಾಣದ ಚುನಾವಣಾ ಅಖಾಡಕ್ಕೆ ಇಳಿದಿತ್ತು. ಅದರಂತೆ ತೆಲಂಗಾಣದ ಜನರು ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲಿಗೆ ರಾಜ್ಯ ಕಾಂಗ್ರೆಸ್ ನಾಯಕರ ಚುನಾವಣಾ ತಂತ್ರಗಾರಿಕೆ, ಪ್ರಚಾರ ಫಲ ನೀಡಿದೆ.
ತೆಲಂಗಾಣದಲ್ಲೇ ಬೀಡುಬಿಟ್ಟ ರಾಜ್ಯ ಕಾಂಗ್ರೆಸ್ ನಾಯಕರು :ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಕಸರತ್ತು ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ತೆಲಂಗಾಣದಲ್ಲಿ ಬೀಡು ಬಿಟ್ಟಿದ್ದಾರೆ. ಹೈದರಾಬಾದ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜತೆ ಮುಂದಿನ ಕಾರ್ಯತಂತ್ರ ಕುರಿತು ತೆಲಂಗಾಣ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸುತ್ತಿದ್ದಾರೆ. ಸಚಿವರಾದ ಜಮೀರ್ ಅಹಮದ್ ಖಾನ್, ರಹೀಂಖಾನ್ ಮತ್ತಿತರರು ಉಪಸ್ಥಿತರಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿಗೆ ಡಿಸಿಎಂ ಡಿಕೆಶಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ತೆಲಂಗಾಣದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಕೆ.ಜೆ ಜಾರ್ಜ್ ಅವರನ್ನು ಎಐಸಿಸಿ ನಿಯೋಜಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ನಾಯಕನ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ.
ರಾಜ್ಯ ಕೈ ನಾಯಕರ ಅಬ್ಬರ :ತೆಲಂಗಾಣ ವಿಜಯದಲ್ಲಿ ರಾಜ್ಯದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳು ಸಹ ಪ್ರಮುಖ ಪಾತ್ರ ವಹಿಸಿದ್ದಾರೆ.ಕರ್ನಾಟಕ ಕಾಂಗ್ರೆಸ್ ಪಕ್ಷದ ಸಮಿತಿ ವತಿಯಿಂದ ಚುನಾವಣೆ ಸಲುವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಎನ್.ಎಸ್ ಬೋಸರಾಜು, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಡಾ. ಎಂ.ಸಿ ಸುಧಾಕರ್, ಕೆ.ಹೆಚ್ ಮುನಿಯಪ್ಪ, ಡಾ. ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಬಿ.ಝಡ್ ಜಮೀರ್ ಅಹಮದ್ ಖಾನ್, ಸಂತೋಷ್ ಲಾಡ್, ಶಿವರಾಜ್ ತಂಗಡಗಿ ಸೇರಿದಂತೆ ಕಾಂಗ್ರೆಸ್ ಪಕ್ಷದ 53ಜನ ಶಾಸಕರು, 8 ಜನ ಹಿರಿಯ ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ರಾಜ್ಯದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ತೆಲಂಗಾಣದ ಚುನಾವಣಾ ಅಖಾಡಕ್ಕೆ ದುಮುಕಿ ಭರ್ಜರಿ ಪ್ರಚಾರ ನಡೆಸಿದ್ದರು.
ತೆಲಂಗಾಣ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಎಐಸಿಸಿ ವಾರ್ ರೂಂ ಉಸ್ತುವಾರಿ ಕರ್ನಾಟಕ ರಾಜ್ಯದ ಮೆಹರೂಜ್ ಖಾನ್ ನೇತೃತ್ವದಲ್ಲಿ ನಡೆದಿತ್ತು. ವಾರ್ ರೂಂ ಕೋಅರ್ಡಿನೇಟರ್ ಎ.ಎನ್. ನಟರಾಜ್ ಗೌಡ, ನಿಂಬಗಲ್ ರಾಮಕೃಷ್ಣ, ಐ.ಜಿ.ಚಿನ್ನಪ್ಪ, ವಾಸುದೇವ ಮೂರ್ತಿ ಅವರು ಹೈದರಾಬಾದ್ ನಗರದಲ್ಲಿ ವಾರ್ ರೂಂ ಕಚೇರಿ ಮುಖಾಂತರ ಚುನಾವಣೆ ಉಸ್ತುವಾರಿ ವಹಿಸಿಕೊಂಡು ಕಾರ್ಯತಂತ್ರ ರೂಪಿಸಿದ್ದರು.
ತೆಲಂಗಾಣ ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಬೂತ್ ಮಟ್ಟದಲ್ಲಿ, ನಗರ ಪ್ರದೇಶ, ಮಂಡಲ ಸೇರಿದಂತೆ ಹಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷದ 6 ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ನೀಡುವುದರ ಮೂಲಕ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ ರೆಡ್ಡಿ, ಪ್ರತಿಪಕ್ಷದ ನಾಯಕರಾಗಿದ್ದ ಭಟ್ಟಿ ವಿಕ್ರಮಾರ್ಕ್ ಪ್ರಚಾರ ತಂತ್ರ ಯಶಸ್ಬಿಯಾಗುವಂತೆ ನೋಡಿಕೊಂಡಿದ್ದಾರೆ.
ಇದನ್ನೂ ಓದಿ :ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಉತ್ತರದ ಮೂರು ರಾಜ್ಯಗಳು ಗೆಲುವಿನ ಗಿಫ್ಟ್ ಕೊಟ್ಟಿವೆ: ಕೆ.ಎಸ್.ಈಶ್ವರಪ್ಪ