ಕರ್ನಾಟಕ

karnataka

ETV Bharat / state

ಆರ್ಥಿಕ ಸಂಕಷ್ಟವಿದ್ದರೂ ಈವರೆಗೆ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದ ರಾಜ್ಯ ಸರ್ಕಾರ ; ಏನಿದು ಲೆಕ್ಕಾಚಾರ!? - stategoverment loan from rbi

ಕೊರತೆ ಆದಾಯವನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಾಲ ಎತ್ತುವುದು ಅನಿವಾರ್ಯವಾಗಿದೆ. ಆದರೆ, ಈವರೆಗೂ ಕರ್ನಾಟಕ ಆರ್​​ಬಿಐ ಮೂಲಕ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಿಲ್ಲ..

state government not did loan rise from rbi
ಸಾಲ ಎತ್ತುವಳಿ ಮಾಡದ ರಾಜ್ಯ ಸರ್ಕಾರ

By

Published : Oct 3, 2021, 9:18 PM IST

ಬೆಂಗಳೂರು :ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ಈ ಬಾರಿ ಬಹುತೇಕ ನೆಚ್ಚಿಕೊಂಡಿರುವುದು ಸಾಲವನ್ನೇ.. ಆದರೆ, ಅಚ್ಚರಿ ಎಂಬಂತೆ ಈವರೆಗೆ ರಾಜ್ಯ ಸರ್ಕಾರ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಿಲ್ಲ.‌ ಕೋವಿಡ್ ಎರಡನೇ ಅಲೆಗೆ ಕರ್ನಾಟಕ ಅಕ್ಷರಶಃ ಮಂಡಿಯೂರಿತ್ತು.

ಮತ್ತೊಮ್ಮೆ ಲಾಕ್‌ಡೌನ್ ಹೇರುವ ಮೂಲಕ ರಾಜ್ಯದ ಬೊಕ್ಕಸ ಮತ್ತೆ ಖಾಲಿಯಾಗಿದೆ. ಸುಮಾರು ಎರಡು ತಿಂಗಳ ಕಾಲ ಲಾಕ್‌ಡೌನ್ ಹೇರುವ ಮೂಲಕ ರಾಜ್ಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.‌ ಬಳಿಕ ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ತೆರವು ಮಾಡುತ್ತಿದೆ‌. ಇತ್ತ ರಾಜ್ಯವೂ ಬಹುಬೇಗ ಆರ್ಥಿಕ ಚೇತರಿಕೆ ಕಾಣುತ್ತಿದೆ. ತೆರಿಗೆ ಸಂಗ್ರಹ ಕಳೆದ ವರ್ಷದಿಂದ ಸುಮಾರು 43% ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯ ಈ ಬಾರಿ ಉತ್ತಮ ಚೇತರಿಕೆ ಕಾಣುತ್ತಿದೆ.

ಬಹುತೇಕ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರುತ್ತಿದ್ದು, ಸರ್ಕಾರದ ಬೊಕ್ಕಸವೂ ಭರ್ತಿಯಾಗುತ್ತಿದೆ. ಆದರೂ ಈ ಬಾರಿ ಸುಮಾರು 20 ಸಾವಿರ ಕೋಟಿ ರೂ. ಆದಾಯ ಕೊರತೆಯ ಭೀತಿ ಎದುರಾಗಿದೆ. ಆದಾಯ ಕೊರತೆಯನ್ನು ನೀಗಿಸಲು ಸರ್ಕಾರ ನೆಚ್ಚಿಕೊಂಡಿರುವುದು ಸಾಲವನ್ನ. 2021-22 ಸಾಲಿನಲ್ಲಿ 71,332 ಕೋಟಿ ರೂ. ಸಾಲ ಮಾಡುವುದಾಗಿ ಸರ್ಕಾರ ಬಜೆಟ್​​​​ನಲ್ಲಿ ಅಂದಾಜಿಸಿದೆ.

ಇನ್ನೂ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದ ರಾಜ್ಯ:

ಕೊರತೆ ಆದಾಯವನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಾಲ ಎತ್ತುವುದು ಅನಿವಾರ್ಯವಾಗಿದೆ. ಆದರೆ, ಇಲ್ಲಿವರೆಗೂ ಕರ್ನಾಟಕ ಆರ್​​ಬಿಐ ಮೂಲಕ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಿಲ್ಲ. ಮೊದಲ ತ್ರೈಮಾಸಿಕದಲ್ಲಿ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಯಾವುದೇ ಸಾಲ ಎತ್ತುವಳಿ ಮಾಡದ ರಾಜ್ಯ ಸರ್ಕಾರ ಜುಲೈ-ಸೆಪ್ಟೆಂಬರ್​ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡುವುದಾಗಿ ಆರ್​ಬಿಐಗೆ ತಿಳಿಸಿತ್ತು.

ಆರ್​​ಬಿ​ಐಗೆ ತಿಳಿಸಿದಂತೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತಲಾ 4,000 ಕೋಟಿಯಂತೆ ಒಟ್ಟು 8,000 ಕೋಟಿ ರೂ‌. ಸಾಲ ಎತ್ತುವಳಿ ಮಾಡುವುದಾಗಿ ಹೇಳಿತ್ತು. ಮಾರುಕಟ್ಟೆ ಸಾಲದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದ ಕರ್ನಾಟಕ, ಆಗಸ್ಟ್ 3 ಮತ್ತು ಆಗಸ್ಟ್ 17ರಂದು ತಲಾ 2,000 ಕೋಟಿ ರೂ. ಹಾಗೂ ಸೆ.7 ಮತ್ತು 14ರಂದು ಮತ್ತೆ ತಲಾ 2,000 ಕೋಟಿ ರೂ.ನಂತೆ ಒಟ್ಟು 8,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿತ್ತು.

ಆದರೆ, ಆಗಸ್ಟ್ ಹಾಗೂ ಸೆಪ್ಟೆಂಬರ್​ನಲ್ಲೂ ರಾಜ್ಯ ಸರ್ಕಾರ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಿಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲೇ ಸಾಲ ಮಾಡಲು ಪ್ರಾರಂಭಿಸಿತ್ತು.‌ ಆದರೆ, ಈ ಬಾರಿ ಮಾತ್ರ ಸೆಪ್ಟೆಂಬರ್ ಆದರೂ ಸಾಲ ಎತ್ತುವಳಿ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ.

ಈಗಾಗಲೇ ಆರ್​ಬಿಐ ಕೈಗೊಳ್ಳುವ ಮಾರುಕಟ್ಟೆ ಸಾಲ ಎತ್ತುವಳಿ ಹರಾಜಿನಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ತಾನ, ಗುಜರಾತ್, ಪಂಜಾಬ್, ಆಂಧ್ರ ಪ್ರದೇಶ ಹಾಗೂ ಕೇರಳ ನಿರಂತರವಾಗಿ ಪಾಲ್ಗೊಳ್ಳುತ್ತಿದೆ. ಲಾಕ್‌ಡೌನ್​​ನಿಂದ ಭಾರಿ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಈ ರಾಜ್ಯಗಳು ಬಹು ಪ್ರಮಾಣದಲ್ಲಿ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡುತ್ತಿವೆ. ಆದರೆ, ಕರ್ನಾಟಕ ಮಾತ್ರ ಆರ್ಥಿಕ ವರ್ಷದ ಆರು ತಿಂಗಳು ಕಳೆದರೂ ಸಾಲ ಎತ್ತುವಳಿ ಮಾಡಿಲ್ಲ.

ಮಾರುಕಟ್ಟೆಯಿಂದ ಸಾಲ ಎತ್ತದಿರಲು ಕಾರಣ ಏನು?:

ಸಾಮಾನ್ಯವಾಗಿ ರಿಸರ್ವ್​ ಬ್ಯಾಂಕ್​ ಮೂಲಕ ರಾಜ್ಯ ಸರ್ಕಾರ ರಾಜ್ಯ ಅಭಿವೃದ್ಧಿ ಸಾಲ (ಎಸ್ ಡಿಎಲ್)ವನ್ನು ಪಡೆಯುತ್ತದೆ. ಈ ಮುಕ್ತ ಮಾರುಕಟ್ಟೆ ಸಾಲದ ಮೂಲಕ ಆದಾಯ ಕೊರತೆಯನ್ನು ನೀಗಿಸುತ್ತದೆ. ಆದರೆ, ಕರ್ನಾಟಕ ಮೊದಲ ತ್ರೈಮಾಸಿಕ ಮಾತ್ರವಲ್ಲ ಎರಡನೇ ತ್ರೈಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ. ಎರಡನೇ ತ್ರೈಮಾಸಿಕದ ಆಗಸ್ಟ್​​ ಹಾಗೂ ಸೆಪ್ಟೆಂಬರ್​​ನಲ್ಲಿ ಸಾಲ ಪಡೆಯುವುದಾಗಿ ಆರ್​​ಬಿಐಗೆ ತಿಳಿಸಿದ್ದರೂ, ಯಾವುದೇ ಸಾಲವನ್ನು ಎತ್ತುವಳಿ ಮಾಡಿಲ್ಲ.

ರಾಜ್ಯ ಸರ್ಕಾರ ಇಲ್ಲಿವರೆಗೆ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದೇ ಇರಲು ಕಾರಣ ಸುಧಾರಿಸುತ್ತಿರುವ ಆದಾಯ ಸಂಗ್ರಹ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಸಂಗ್ರಹ ಉತ್ತಮ ಚೇತರಿಕೆ ಕಾಣುತ್ತಿದೆ.‌ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 43% ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಸ್ವಂತ ತೆರಿಗೆ ಮೂಲಕ ಆಗಸ್ಟ್ ವರೆಗೆ 43,409 ಕೋಟಿ ರೂ. ಸಂಗ್ರಹಿಸಿದೆ. ಒಟ್ಟು ರಾಜಸ್ವ ಸಂಗ್ರಹ 66,489 ಕೋಟಿ ರೂ. ತಲುಪಿದೆ. ಇತ್ತ ಜಿಎಸ್​ಟಿ ಪರಿಹಾರವಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 8,542 ಕೋಟಿ ಮೊತ್ತ ಬಿಡುಗಡೆ ಮಾಡಿದೆ. ಇದು ರಾಜ್ಯಕ್ಕೆ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಹೀಗಾಗಿ ಈವರೆಗೆ ರಾಜ್ಯ ಸರ್ಕಾರ ಆರ್​​ಬಿಐ ಮೂಲಕ ಸಾಲ ಎತ್ತುವಳಿ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ತ್ರೈಮಾಸಿಕದಲ್ಲಿ 20,000 ಕೋಟಿ ಸಾಲ?:

ಮುಂದಿನ ಅಕ್ಟೋಬರ್-ಡಿಸೆಂಬರ್​ವರೆಗಿನ ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿದೆ. ಅಕ್ಟೋಬರ್​​ನಿಂದ ಡಿಸೆಂಬರ್​​ವರೆಗೆ 20,000 ಕೋಟಿ ರೂ.‌ ಸಾಲ ಎತ್ತುವಳಿ ಮಾಡಲು ಮುಂದಾಗಿದೆ. ಕರ್ನಾಟಕ ಸರ್ಕಾರ ಅಕ್ಟೋಬರ್​​ನಲ್ಲಿ ಮೂರು ಬಾರಿ ತಲಾ 2,000 ಕೋಟಿಯಂತೆ 6,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ.

ಇನ್ನು, ನವಂಬರ್ ತಿಂಗಳಲ್ಲೂ ಮೂರು ಬಾರಿ ತಲಾ 2,000 ಕೋಟಿಯಂತೆ 6,000 ಕೋಟಿ ರೂ. ಸಾಲ ಮಾಡಲಿದೆ. ಇನ್ನು ಡಿಸೆಂಬರ್ ತಿಂಗಳಲ್ಲೂ ನಾಲ್ಕು ಬಾರಿ ತಲಾ 2,000 ಕೋಟಿಯಂತೆ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ. ಜನವರಿಯಿಂದ ಮಾರ್ಚ್​​ವರೆಗಿನ ಕೊನೆಯ ತ್ರೈಮಾಸಿಕದಲ್ಲಿ ನಿರಂತರವಾಗಿ ರಾಜ್ಯ ಸರ್ಕಾರ ಸಾಲ ಎತ್ತುವಳಿ ಮಾಡಲಿದೆ ಎಂದು ಅರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details