ಬೆಂಗಳೂರು:ಕೊರೊನಾ ಸೋಂಕು ಹೆಚ್ಚಳ ಹಾಗೂ ಅದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರು ನಗರದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಮೇಯರ್ಗಳ ಜತೆ ಸಭೆ ನಡೆಸಿದರು.
ಈ ಸಭೆಯಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೊರೊನಾ ಟಾಸ್ಕ್ ಫೋರ್ಸ್ ಅಧ್ಯಕ್ಷ ರಮೇಶ್ ಕುಮಾರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಜರಿದ್ದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು, ತಪಾಸಣೆಗೆ ಒಳಪಡಿಸಿದವರ ವರದಿಯನ್ನು ತ್ವರಿತವಾಗಿ ನೀಡುವುದು, ಸಮಸ್ಯೆಯಲ್ಲಿರುವ ಹಾಗೂ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ತ್ವರಿತಗತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಲು ಅವಕಾಶ ಕಲ್ಪಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಜನರ ಜೀವದ ಜೊತೆ ಸರ್ಕಾರ ಆಟವಾಡುತ್ತಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಚುರುಕುಮುಟ್ಟಿಸುವ ಹಾಗೂ ಕೋವಿಡ್ ವಿರುದ್ಧ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲದೆ ಸಮುದಾಯದ ಹಂತ ತಲುಪಿರುವ ಈ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದ್ದು, ಸರ್ಕಾರ, ಮುಖ್ಯಮಂತ್ರಿ ಅಥವಾ ಸಚಿವರು ಈ ನಿಟ್ಟಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದು, 200 ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದೆ. ಇವೆಲ್ಲವನ್ನು ಬಯಲಿಗೆಳೆಯುವ ಹಾಗೂ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕಾರ್ಯವನ್ನು ನಾವು ಸಮರ್ಥವಾಗಿ ಮಾಡಬೇಕಾಗಿದೆ ಎಂದು ಸಲಹೆಯಿತ್ತರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಮತ್ತು ಪಕ್ಷದ ಇಬ್ಬರು ಬಿಬಿಎಂಪಿ ಸದಸ್ಯರಿಗೂ ಮಹಾಮಾರಿ ಕಾಡಿದ್ದು, ಈ ವಿಚಾರವಾಗಿಯೂ ಗಂಭೀರ ಚರ್ಚೆ ನಡೆಯಿತು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸ್ವಯಂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಲು ಸೂಚನೆ ನೀಡಲು ತೀರ್ಮಾನಿಸಲಾಯಿತು.