ಕರ್ನಾಟಕ

karnataka

ETV Bharat / state

ಪೌತಿ ಖಾತೆ ಆಂದೋಲನಕ್ಕೆ ಮುಂದಾದ ರಾಜ್ಯ ಸರ್ಕಾರ - banglore latest news

ಕಂದಾಯ ಜಮೀನುಗಳ ಪೌತಿ ಖಾತೆ ಆಂದೋಲನ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಪಿತ್ರಾರ್ಜಿತ ಜಮೀನನ್ನು ಅವರ ಮಕ್ಕಳಿಗೆ ವಿಭಜಿಸಿ ಪೌತಿ ಖಾತೆ ಮಾಡಿಸುವಂತೆ ಸರ್ಕಾರ ಡಿಸಿಗಳಿಗೆ ಸೂಚನೆ ನೀಡಿದೆ.

ರಾಜ್ಯ ಸರ್ಕಾರ.!

By

Published : Oct 2, 2019, 11:56 PM IST

ಬೆಂಗಳೂರು:ಕಂದಾಯ ಜಮೀನುಗಳ ಪೌತಿ ಖಾತೆ ಆಂದೋಲನ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಪಿತ್ರಾರ್ಜಿತ ಜಮೀನನ್ನು ಅವರ ಮಕ್ಕಳಿಗೆ ವಿಭಜಿಸಿ ಪೌತಿ ಖಾತೆ ಮಾಡಿಸುವಂತೆ ಸರ್ಕಾರ ಡಿಸಿಗಳಿಗೆ ಸೂಚನೆ ನೀಡಿದೆ.

ಪೌತಿ ಖಾತೆ ಆಂದೋಲನ ಅಂದರೆ, ಪಿತ್ರಾರ್ಜಿತ ಜಮೀನನ್ನು ಮಕ್ಕಳ ಹೆಸರಿಗೆ ಖಾತೆ ಮಾಡಿಸುವ ಪ್ರಕ್ರಿಯೆ. ರಾಜ್ಯದಲ್ಲಿ ರೈತರಿಗೆ ಪಿತ್ರಾರ್ಜಿತ ಆಸ್ತಿ ವರ್ಗಾಯಿಸುವ ಪೌತಿ ಖಾತೆ ಮಾಡುವುದು ಬಾಕಿ ಇದೆ. ಅದಕ್ಕಾಗಿ ರಾಜ್ಯಾದ್ಯಂತ ಪೌತಿ ಖಾತೆ ಆಂದೋಲನ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪಿತ್ರಾರ್ಜಿತ ಜಮೀನು ಮಕ್ಕಳ ಹೆಸರಿಗೆ ವಿಭಜನೆಗೊಳ್ಳದೆ, ಇನ್ನೂ ಮೃತ ತಾತ, ತಂದೆ, ಪತಿ ಹೆಸರಲ್ಲೇ ಇದೆ‌. ಇದರಿಂದ ಹಲವು ಯೋಜನೆಗಳ ಲಾಭ ರೈತರಿಗೆ ಸಿಗುತ್ತಿಲ್ಲ.

ಪೌತಿ ಖಾತೆ ಮಾಡಿಸಲು ಹಲವು ಕಡೆ ರೈತರೇ ಆಸಕ್ತಿ ತೋರುತ್ತಿಲ್ಲ. ಮೃತ ತಾತ, ತಂದೆ ಹೆಸರಲ್ಲೇ ಜಮೀನು ನೋಂದಣಿಯಾಗಿರುವುದರಿಂದ ಅವರ ರೈತ ಮಕ್ಕಳಿಗೆ ಸರ್ಕಾರದ ಯೋಜನೆಗಳ ಸಂಪೂರ್ಣ ಲಾಭ ಲಭ್ಯವಾಗುತ್ತಿಲ್ಲ. ಇದಕ್ಕಾಗಿ ಸರ್ಕಾರ ಪೌತಿ ಖಾತೆ ಮಾಡಿಸಲು ಮುಂದಾಗಿದೆ. ಪೌತಿ ಖಾತೆಯನ್ನು ಬದಲಾವಣೆ ಮಾಡಿಕೊಳ್ಳದೆ ಅನೇಕ ಕುಟುಂಬಗಳು ಸಾಗುವಳಿ ಮಾಡುತ್ತಿದ್ದಾರೆ.

ಪೌತಿ ಖಾತೆಯ ಲಾಭ ಏನು?

ಪೌತಿ ಖಾತೆ ಬದಲಾವಣೆಯಿಂದ‌ ರೈತರಿಗೆ ಸರ್ಕಾರದ ಸೌಲಭ್ಯಗಳು ಸಂಪೂರ್ಣವಾಗಿ ಲಭ್ಯವಾಗುತ್ತವೆ.‌ ಒಂದು ವೇಳೆ ಪಿತ್ರಾರ್ಜಿತ ಆಸ್ತಿಗೆ ಐವರು ವಾರಸುದಾರರಿದ್ದರೆ, ಐದು ಮಂದಿಯ ಹೆಸರಿಗೆ ಜಮೀನನ್ನು ಹಂಚಿಕೆ ಮಾಡಿ ಪೌತಿ ಖಾತೆ ಮಾಡಿಸಬೇಕು. ಆಗ ಸರ್ಕಾರದ ಯೋಜನೆಗಳಾದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಐವರು ಮಕ್ಕಳಿಗೂ ಸಂದಾಯವಾಗುತ್ತದೆ.

ಸದ್ಯ ಹಲವೆಡೆ ಪಿತ್ರಾರ್ಜಿತ ಜಮೀನು ಹಂಚಿಕೆಯಾಗದೇ ತಾತ, ತಂದೆ ಹೆಸರಲ್ಲೇ ಇದೆ. ಇದರಿಂದ ಯೋಜನೆಯ ಹಣ ಕೇವಲ ಒಬ್ಬರಿಗೆ ಸಂದಾಯವಾಗುತ್ತದೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿಯನ್ನು ಐವರು ಮಕ್ಕಳಿಗೂ ವಿಭಜಿಸಿ, ಪೌತಿ ಖಾತೆ ಮಾಡಿಸಿದರೆ, ಐವರಿಗೂ ಯೋಜನೆ ಹಣ ಪಾವತಿಯಾಗುತ್ತದೆ.

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೌತಿ ಖಾತೆ ಆಂದೋಲನ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸಚಿವ ಆರ್.ಅಶೋಕ್ ಇತ್ತೀಚೆಗೆ ನೆರೆ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಂಡ ವೇಳೆ ಹಲವೆಡೆ ಪೌತಿ ಖಾತೆ ಬದಲಾವಣೆ ಆಗದಿರುವ ಬಗ್ಗೆ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಪೌತಿ ಖಾತೆ ಆಂದೋಲನ ಮಾಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ‌ ನೀಡಲಾಗಿದೆ. ಆ ಮೂಲಕ ರೈತರಿಗೆ ಸರ್ಕಾರದ ಸೌಲಭ್ಯ ಸಂಪೂರ್ಣವಾಗಿ ತಲುಪುವಂತಾಗಬೇಕು ಎಂದು ವಿವರಿಸಿದ್ದಾರೆ.

ABOUT THE AUTHOR

...view details