ಕರ್ನಾಟಕ

karnataka

ETV Bharat / state

ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಕಾಂಗ್ರೆಸ್​ನ ಬಸ್​ ಮಧ್ಯದಲ್ಲೇ ಪಂಕ್ಚರ್​ ಆಗುತ್ತದೆ.. ಬಿ ಎಸ್ ​ಯಡಿಯೂರಪ್ಪ - ವಿಕಾಸಸೌಧದ ಮುಂದೆ ಅಂಬೇಡ್ಕರ್ ಸ್ಪೂರ್ತಿ ಭವನ

ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ- ಒಗ್ಗಟ್ಟಿನ ಮಂತ್ರ ಜಪಿಸಿದ ಮಾಜಿ ಸಿಎಂ - ಕಾಂಗ್ರೆಸ್​ ಕಾಲೆಳೆದ ಯಡಿಯೂರಪ್ಪ

B.S.Y
ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಎಸ್​ವೈ

By

Published : Feb 4, 2023, 12:07 PM IST

Updated : Feb 4, 2023, 2:27 PM IST

ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಎಸ್​ವೈ

ಬೆಂಗಳೂರು:ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲರೂ ಒಟ್ಟಾಗಿದ್ದೇವೆ, ನಾವು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದೇವೆ, ಕಾಂಗ್ರೆಸ್ ನ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗುತ್ತದೆ. ಅದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ, ರಾಜ್ಯದಲ್ಲಿ ಮತ್ತೆ ಕಮಲ ಅರಳುವುದು ನಿಶ್ಚಿತ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಕೊಡಲಾಗಿದೆ. ಈ ಚುನಾವಣೆಯಲ್ಲಿ 130-140 ಸ್ಥಾನ‌ ಗೆಲ್ಲುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಯಾರಿಂದಲೂ ಇದನ್ನು ತಡೆಯಲು ಸಾಧ್ಯವಿಲ್ಲ, ಕಾಂಗ್ರೆಸ್ ನಲ್ಲಿ ನಾನೇ ಸಿಎಂ‌ ಅನ್ನೋ ಸಂಘರ್ಷ ಶುರುವಾಗಿದೆ, ಕಾಂಗ್ರೆಸ್ ನಾಯಕ ಯಾರು? ರಾಹುಲ್ ಗಾಂಧಿನಾ ಎಂದು ಪ್ರಶ್ನಿಸಿದರು.

ರಾಜ್ಯ ಬಜೆಟ್​ನಲ್ಲಿ ಜನತೆಗೆ ಇನ್ನಷ್ಟು ಸವಲತ್ತು.. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ನಮ್ಮ ಯೋಜನೆಗಳು ರಾಜ್ಯದ ಮನೆಮನೆಗೆ ತಲುಪಿವೆ. ರಾಜ್ಯ ಬಜೆಟ್ ನಲ್ಲಿ ಜನತೆಗೆ ಇನ್ನಷ್ಟು ಸವಲತ್ತು ಕೊಡುತ್ತೇವೆ. ಭಾರತದ ಆರ್ಥಿಕತೆ ಉತ್ತಮ ಆಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ‌ ಆತ್ಮವಿಶ್ವಾಸ ನಮ್ಮೆಲ್ಲರಲ್ಲೂ ಇರಬೇಕು, ಪರಿಶಿಷ್ಟ ವರ್ಗಗಳು, ಹಿಂದುಳಿದವರ ಸಮಸ್ಯೆಗಳನ್ನು ಕೇಳಿ ಬಗೆಹರಿಸಿ ಎಂದು ಸಲಹೆ ನೀಡಿದರು.

ಗೋಹತ್ಯೆ ನಿಷೇಧ ಕಾಯ್ದೆ ಮಾಡಿದ್ದೇವೆ‌. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತದೆ, ವಿಕಾಸಸೌಧದ ಮುಂದೆ ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣ ಆಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಬಸ್ ಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ನಲ್ಲಿ ಅತೃಪ್ತಿ, ಅಸಮಾಧಾನ ತುಂಬಿ ತುಳುಕುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲರೂ ಒಟ್ಟಾಗಿ ಇದ್ದೇವೆ. ನಾವು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. ಕಾಂಗ್ರೆಸ್ ಬಸ್ ಯಾತ್ರೆ ಆರಂಭ ಆಗಿದ್ದರೂ ಸಹ ಅತೃಪ್ತಿ ಉಂಟಾಗಿದೆ. ಮಾಜಿ ಡಿಸಿಎಂ ಜಿ. ಪರಮೇಶ್ವರ್ ಕೂಡ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ನ ಬಸ್​ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗುತ್ತದೆ. ಅದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಕಾಂಗ್ರೆಸ್ ನಾಯಕರ ಬಸ್ಸು ಯಾತ್ರೆಗೆ ಬಿಎಸ್​ವೈ ಟಾಂಗ್ ನೀಡಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಬಿಜೆಪಿಯಲ್ಲಿರುವ ಸಂಘಟನೆ ಬೇರೆ ಪಕ್ಷಗಳಲ್ಲಿ ಇಲ್ಲ ನಮಗೆ ಸಿಕ್ಕ ಕಾರ್ಯಕರ್ತರು ದೇವರ ಕೊಡುಗೆ, ಕಾಂಗ್ರೆಸ್ ಪಕ್ಷದಲ್ಲಿ ಇಂಥ ಸಂಘಟನೆ, ಕಾರ್ಯಕರ್ತರು ಇರಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಸರ್ಕಾರ, ಬೊಮ್ಮಾಯಿ ಸರ್ಕಾರ ಹಲವು ಜನೋಪಯೋಗಿ ಯೋಜನೆಗಳನ್ನು ನೀಡಿದೆ, ಇದರ ಸಹಾಯದಿಂದ ನಾವು ರಾಜ್ಯದಲ್ಲಿ ಮತ್ತೆ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದರು.

ಯಡಿಯೂರಪ್ಪರಂಥ ನಾಯಕ ಸಿಕ್ಕಿರುವುದು ಪುಣ್ಯ ನಮ್ಮ, ಬಳಿ ಎಲ್ಲವೂ ಇದೆ, ಚುನಾವಣೆ ಗೆಲ್ಲುವ ವಿಶ್ವಾಸ ಇದೆ, ಕಾಂಗ್ರೆಸ್ ನಲ್ಲಿ ನೇತಾರನೂ ಇಲ್ಲ, ನಾಯಕತ್ವವೂ ಇಲ್ಲ ಕಾಂಗ್ರೆಸ್ ಬಿಟ್ಟು ಹಲವು ನಾಯಕರು ಹೋಗುತ್ತಿದ್ದಾರೆ. ರಾಹುಲ್ ಗಾಂಧಿ ಯಾವಾಗ ಏನು ಮಾತಾಡ್ತಾರೆ ಅಂತ ಅವರಿಗೇ ಗೊತ್ತಿಲ್ಲ, ಕಾಂಗ್ರೆಸ್‌ನವರರಿಗೆ‌ ನೀತಿ ಇಲ್ಲ ಓಲೈಕೆ ರಾಜಕಾರಣವೇ ಅವರ ಆಸ್ತಿ.

ಸಿದ್ದರಾಮಯ್ಯ ಹಿಂದೂಗಳನ್ನು ಅಪಮಾನ ಮಾಡುವ ಹೇಳಿಕೆ ಕೊಡುತ್ತಾರೆ. ಅವರು ಹಿಂದೂಗಳನ್ನು ಅಪಮಾನ ಮಾಡುವ ಬಗ್ಗೆ ಜನತೆಗೆ ಅರಿವಿದೆ ಎಂದರು. ಕಾಂಗ್ರೆಸ್‌ನವರು ಬಾಯಿಗೆ ಬಂದ ಘೋಷಣೆ ಮಾಡುತ್ತಿದಾರೆ. ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ ಆರ್ಥಿಕ ಜ್ಞಾನ ಇಲ್ಲದೇ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ ಮಧ್ಯಪ್ರದೇಶ, ಛತ್ತೀಸ್ ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ನೀಡಿರುವ ಪ್ರಣಾಳಿಕೆ ಭರವಸೆಗಳು ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ನಿಜವಾದ ಅಮೃತಕಾಲದ ಲಕ್ಷಣಗಳು ಕಾಣಿಸುತ್ತಾ ಇವೆ. ಚುನಾವಣೆಯಲ್ಲಿ ನಾವು ಕೃಷ್ಣ ಸಾರಥ್ಯವನ್ನು ವಹಿಸಬೇಕಾಗಿದೆ, ಕಾಂಗ್ರೆಸ್ ನವರು ಬೇಕಾದ್ದು ಸುಳ್ಳು ಹೇಳಿಕೊಂಡು ಹೋಗುತ್ತಾರೆ. 200 ಯುನಿಟ್ ಕರೆಂಟ್ ಫ್ರೀ ಕೊಡುತ್ತಾರಂತೆ. ಕೊಡುವುದಾದರೆ ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ಯಾಕೆ ಕೊಡಲಿಲ್ಲ? ಇವರ ಕಾಲದಲ್ಲಿ ಸುಳ್ಯದಲ್ಲಿ ಕರೆಂಟ್ ಕೇಳಿದ್ದಕ್ಕೆ ಯುವಕನನ್ನು ಜೈಲಿಗೆ ಹಾಕಿದ್ದರು. 2012 ರಲ್ಲಿ 3 ದಿನ ಇಡೀ ಉತ್ತರ ಭಾರತ ಕತ್ತಲೆಯಲ್ಲಿ ಇತ್ತು ಇಂತಹವರು ಇಂದು ಫ್ರೀ ವಿದ್ಯುತ್ ಕೊಡುತ್ತಾರಂತೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ನವರು ಪಂಚರತ್ನ ಯಾತ್ರೆ ಅಂತಾ ಹೊರಟಿದ್ದಾರೆ. ಪಂಚರತ್ನ ಅಂತಾ ಯಾಕೆ ಹೆಸರು ಇಟ್ಟಿದ್ದಾರೆ ಅಂತಾ ನನಗೆ ಕನ್ಫ್ಯೂಸ್ ಆಗಿದೆ. ದೇವೇಗೌಡರ ಮನೆಯಲ್ಲಿ 9 ಜನ ಇದ್ದಾರೆ ಅವರು ನವಗ್ರಹ ಯಾತ್ರೆ ಅಂತಾ ಇಡಬೇಕಿತ್ತು. ಮೊನ್ನೆ ಅವರ ಮನೆಯೊಳಗೇ ಬಡಿದಾಟವಾಯಿತು. ಕೊನೆಗೆ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಅಂತಾ ಹೇಳಿದರು.

ಹೈಕಮಾಂಡ್ ಎಲ್ಲಿರೋದು ಅಡುಗೆ ಮನೇಲಾ..? ಕುಟುಂಬದಲ್ಲಿ ಒಟ್ಟಿಗೆ ಇರಲು ಇವರಿಗೆ ಯೋಗ್ಯತೆ ಇಲ್ಲ, ಕುಟುಂಬ ಸರಿಯಾಗಿ ಇಲ್ಲದವರು. ಇವರು ರಾಜ್ಯ ಉದ್ಧಾರ ಮಾಡ್ತಾರಾ..? ಇರುವ 5 ಜಿಲ್ಲೆಯಲ್ಲಿ 9 ಜನ ಇವರ ಮನೆಯವರೇ ಇದ್ದಾರೆ ಇವರು ರಾಜ್ಯ ಉದ್ದಾರ ಮಾಡುತ್ತಾರಾ? ಎಂದು ಟೀಕಿಸಿದರು. ಅಲ್ಲದೆ ಕಾಂಗ್ರೆಸ್ ನವರದ್ದು ಪ್ರಜಾದ್ವನಿ ಯಾತ್ರೆ. ತುರ್ತು ಪರಿಸ್ಥಿತಿಯಲ್ಲಿ ಕತ್ತು ಹಿಸುಕಿದವರು ಇಂದು ಪ್ರಜಾ ಧ್ವನಿ ಮಾಡುತ್ತಿದ್ದಾರೆ ಇದು ಸಿದ್ದರಾಮಯ್ಯನವರಿಗೆ ಕ್ಷೇತ್ರ ಹುಡುಕುವ ಭಾಗ್ಯ ಯಾತ್ರೆ, ಒಬ್ಬ ಸಿಎಂ ಆದವರಿಗೆ ಸ್ವಂತ ಕ್ಷೇತ್ರದಲ್ಲಿ ನಿಂತು ಗೆಲ್ಲುವ ಯೋಗ್ಯತೆ ಇಲ್ಲ ಎಂದು ಕಾಲೆಳೆದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಕಾಂಗ್ರೆಸ್ ನಲ್ಲಿ ಜಗಳ ಶುರುವಾಗಿದೆ, ನಮ್ಮ ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಹೋದರೆ ಒಂದೊಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ. ದೇಶದಲ್ಲಿ ಮೊದಲೇ ಬಾರಿಗೆ ಬಂಜಾರ ಸಮುದಾಯಕ್ಕೆ ಹಕ್ಕು ಪತ್ರ ವಿತರಣೆ ಮಾಡಿರುವ ಸರ್ಕಾರ ಅಂದರೆ ಕರ್ನಾಟಕ ಸರ್ಕಾರ, ಡಬಲ್ ಇಂಜಿನ್ ಸರ್ಕಾರಗಳಿಂದ ಬಹಳ ಅದ್ಭುತ ವಾದ ಕೆಲಸ ನಡೆಯುತ್ತಿದೆ.

ಆದರೆ ಈಗ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ ಒಬ್ಬರು ಸಿಎಂ ಆಗಿದ್ದಂತವರು ಇನ್ನೂ ಅವರಿಗೆ ಒಂದು ಕ್ಷೇತ್ರ ಸಿಕ್ಕಿಲ್ಲ, ಇನ್ನೊಬ್ಬರು ಕೆಪಿಸಿಸಿ ಅಧ್ಯಕ್ಷರು ಇಬ್ಬರು ಪ್ರತ್ಯೇಕ ಯಾತ್ರೆ ಶುರುವಾಗುತ್ತಿದ್ದಂತೆ ಪರಮೇಶ್ವರ್ ಅವರಿಂದ ಕಾಂಗ್ರೆಸ್ ಜಗಳ ಬೀದಿಗೆ ಬಂದಿದೆ. ಈವರೆಗೆ ಎರಡು ಗುಂಪಿತ್ತು, ಈಗ ಮೂರು ಗುಂಪಾಗಿದೆ. ಪರಮೇಶ್ವರ್, ಮುನಿಯಪ್ಪ ಅಸಮಧಾನಗೊಂಡಿದ್ದಾರೆ, ಜೆಡಿಎಸ್ ನ ಪಂಚರತ್ನ ಯಾತ್ರೆ ಹಾಸನದಲ್ಲಿ ಬ್ರೇಕ್ ಫೇಲ್ ಆಗಿದೆ, ಹಾಸನ ಜೆಡಿಎಸ್ ನಲ್ಲಿ ಜಗಳ ನಡೀತಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ‌ ಡಿ‌ ಕೆ ಅರುಣಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಡಿವಿ ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು, ವಿವಿಧ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಬಿಜೆಪಿ ಚುನಾವಣಾ ಪ್ರಭಾರಿಯಾಗಿ ಧರ್ಮೇಂದ್ರ ಪ್ರಧಾನ್, ಸಹ ಪ್ರಭಾರಿಯಾಗಿ ಅಣ್ಣಾಮಲೈ ನೇಮಕ

Last Updated : Feb 4, 2023, 2:27 PM IST

ABOUT THE AUTHOR

...view details