ಕರ್ನಾಟಕ

karnataka

ETV Bharat / state

ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಒಟ್ಟಾಗಿ ಶ್ರಮಿಸೋಣ: ವಿಜಯೇಂದ್ರ - ಬಿಜೆಪಿ ರಾಜ್ಯ ಕಾರ್ಯಾಲಯ

ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರಮುಖರ ವಿಶೇಷ ಸಭೆ ನಡೆಯಿತು.

BJP party special meeting was held in Bangalore.
ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಪಕ್ಷದ ಪ್ರಮುಖರ ವಿಶೇಷ ಸಭೆ ನಡೆಯಿತು.

By ETV Bharat Karnataka Team

Published : Dec 28, 2023, 6:44 PM IST

ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸುವಂತೆ ಶ್ರಮಿಸುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಲೋಕಸಭೆ ಸೇರಿದಂತೆ ಮುಂದಿನ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಹಿರಿಯರ ಮಾರ್ಗದರ್ಶನ ಬೇಕು. ಹಿರಿಯರು ಪಕ್ಷದ ಭವಿಷ್ಯದ ದೃಷ್ಟಿಯಿಂದ ಮತ್ತು ಪಕ್ಷಕ್ಕೆ ಶಕ್ತಿ ತುಂಬಲು ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ಮುಕ್ತವಾಗಿ ಕೊಡಬೇಕು ಎಂದರು.

ಬಿಜೆಪಿ ಕರ್ನಾಟಕದಲ್ಲಿ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು ಬಿ.ಎಸ್.ಯಡಿಯೂರಪ್ಪನವರು, ಸದಾನಂದ ಗೌಡರು, ಈಶ್ವರಪ್ಪನವರು, ಸಿ.ಟಿ.ರವಿಯವರು, ಬಸವರಾಜ ಬೊಮ್ಮಾಯಿಯವರು ಸೇರಿ ಅನೇಕ ಹಿರಿಯರು ಕಾರಣಕರ್ತರಾಗಿದ್ದಾರೆ. ಅಂಥ ಎಲ್ಲ ಹಿರಿಯರು ಇಲ್ಲಿದ್ದಾರೆ. ಪ್ರತಿಯೊಬ್ಬರ ಪರಿಶ್ರಮ ಪಕ್ಷದ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದರು.

ಬಿಜೆಪಿಯ ಬೃಹತ್​ ಕಟ್ಟಡ ಮಾತ್ರ ನಮಗೆ ಕಾಣುತ್ತದೆ. ಆದರೆ ಕಟ್ಟಡದ ಅಡಿಪಾಯ ನಮಗೆ ಗೋಚರಿಸುವುದಿಲ್ಲ. ಬಿಜೆಪಿಗೆ ಸುಭದ್ರ ಬುನಾದಿ ಹಾಕಿದ ಹಿರಿಯರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಅವರೆಲ್ಲರೂ ಪಕ್ಷವನ್ನು ಮುನ್ನಡೆಸಲು ಮಾರ್ಗದರ್ಶನ ಮಾಡಬೇಕೆಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆ ಮುಂದಿನ ಗುರಿ:ಪಕ್ಷದ ರಾಷ್ಟ್ರದ ಹಿರಿಯರ ಆಶೀರ್ವಾದದಿಂದ ಈ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಎಲ್ಲ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಸಹಕಾರದಿಂದ ಮುಂದಿನ ಲೋಕಸಭಾ ಚುನಾವಣೆ ನಮ್ಮ ಮುಂದಿನ ಗುರಿಯಾಗಿ ಇಟ್ಟುಕೊಳ್ಳೋಣ. ಲೋಕಸಭೆ ಚುನಾವಣೆ ಮಾತ್ರವಲ್ಲದೆ ನಂತರ ಬರುವ ಜಿ.ಪಂ, ತಾ.ಪಂ, ವಿಧಾನ ಪರಿಷತ್ ಸೇರಿ ಎಲ್ಲ ಚುನಾವಣೆಗಳಲ್ಲಿ ಕೂಡ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲೇಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್​ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಬಿಜೆಪಿ ಪ್ರಮುಖರ ಸಭೆ ಯಶಸ್ವಿ- ಪಿ.ರಾಜೀವ್:ಸಭೆ ಬಳಿಕ ಮಾಧ್ಯಮದವರ ಜೊತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ರಾಜ್ಯದಲ್ಲಿ ಎಲ್ಲ ರೀತಿಯಲ್ಲಿ ಪಕ್ಷದ ಬೆಳವಣಿಗೆ, ಎಲ್ಲಾ ಕ್ಷೇತ್ರದಲ್ಲಿಯೂ ಗೆಲ್ಲುವ ಕಾರ್ಯತಂತ್ರ ರೂಪಿಸುವ ಚರ್ಚೆಯಾಯಿತು. ರಾಜ್ಯ ನಾಯಕರು ಸಲಹೆ ಮಾರ್ಗದರ್ಶನ ನೀಡಿದ್ದಾರೆ. ಒಟ್ಟಾಗಿ ತಂಡ ರಚಿಸಿ ರಾಜ್ಯ ಪ್ರವಾಸ ಕೈಗೊಳ್ಳುವ ನಿರ್ಧಾರವನ್ನು ಮಾಡಲಾಯಿತು ಎಂದರು.

ತೆಂಗು ಬೆಂಬಲ ಬೆಲೆ ಏರಿಕೆ:ಕೊಬ್ಬರಿ ಬೆಲೆ ಹೆಚ್ಚಿಸಿದ್ದಕ್ಕೆ ಸಭೆಯಲ್ಲಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ರಾಜ್ಯಾಧ್ಯಕ್ಷರು ದೆಹಲಿಗೆ ಭೇಟಿ ನೀಡಿದ್ದಾಗ ಈ ವಿಷಯವನ್ನು ಪ್ರಧಾನಿಗೆ ತಿಳಿಸಿದ್ದರು. ಇಲ್ಲಿನ ರೈತರ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟ ಕಾರಣ ಬೆಂಬಲ ಬೆಲೆ ಘೋಷಣೆಯಾಗಿದೆ ಎಂದು ತಿಳಿಸಿದರು.

ಕನಿಷ್ಠ ಬೆಂಬಲ ಬೆಲೆ 5250 ಮತ್ತು 5500 ರೂ.ಗೆ ಹೆಚ್ಚಿಸಿರುವುದು ತೆಂಗು ಬೆಳೆಗಾರರಿಗೆ ಹರ್ಷ ತಂದಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆಂಗು ಬೆಳಗಾರರ ಪರ ಇದೆ ಎನ್ನುವುದನ್ನು ಇದು ತೋರಿಸಿದೆ. ಆದರೆ ಇಲ್ಲಿ ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದಿಲ್ಲ, ಬರಪರಿಹಾರ ನೀಡುವ ಕೆಲಸ ಮಾಡಿಲ್ಲ,‌ ಸಚಿವರು ಜಿಲ್ಲೆಗಳ ಪ್ರವಾಸ ಮಾಡುತ್ತಿಲ್ಲ. ಘೋಷಣೆ ಮಾಡಲು ಕೈಯಲ್ಲಿ ಏನೂ ಇಲ್ಲ. ಬೊಕ್ಕಸ ಖಾಲಿಯಾಗಿದೆ ಎನ್ನುವ ಕಾರಣಕ್ಕೆ ಹೋಗುತ್ತಿಲ್ಲ. ಈ ರೀತಿಯಾದರೆ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸುವುದು ಕಷ್ಟ ಎನ್ನುವ ಪರಿಸ್ಥಿತಿ ಸಚಿವರಿಗೆ ಇದೆ. ಇದು ಕಾಂಗ್ರೆಸ್ ಸ್ಥಿತಿ ಎಂದು ಟೀಕಿಸಿದರು.

ಇದನ್ನೂಓದಿ:'ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯ ನಾಯಕರಿಂದ ಒತ್ತಡ'

ABOUT THE AUTHOR

...view details