ಬೆಂಗಳೂರು:ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಉದ್ದೇಶಿತ ಸರ್ಕಾರಿ ಮಾದರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ 'ಸ್ಪೋಕನ್ ಇಂಗ್ಲಿಷ್' ಕಲಿಸಲಾಗುತ್ತೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ' ಕುರಿತು ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿದರು.
ಕನ್ನಡ ಕಲಿಕೆ ಜೊತೆಗೆ ಇಂಗ್ಲಿಷ್ ಕಲಿಕೆ :ಈ ವೇಳೆ ಮಾತಾನಡಿದ ಸಚಿವರು, ಹೋಬಳಿ/ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದೊಂದು ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಈ ಸಾಲಿನ ಬಜೆಟ್‌ನಲ್ಲಿ ಈ ಅಂಶವನ್ನು ಘೋಷಣೆ ಮಾಡಲಾಗಿದೆ. ಶಾಲೆಯ ಎಲ್ಲ ತರಗತಿಗಳಿಗೆ ಅಗತ್ಯ ಕೊಠಡಿಗಳು ಮತ್ತು ಎಲ್ಲ ಭಾಷೆ ಮತ್ತು ವಿಷಯಕ್ಕೆ ತಲಾ ಒಬ್ಬರು ಶಿಕ್ಷಕರು ಲಭ್ಯವಿರುವಂತಹ ವ್ಯವಸ್ಥೆ ಮಾಡಲಾಗುತ್ತದೆ.
ಇಂತಹ ಶಾಲೆಗಳಲ್ಲಿ ಕನ್ನಡ ಕಲಿಕೆ ಜೊತೆಗೆ ಇಂಗ್ಲಿಷ್ ಕಲಿಕೆ ಹಾಗೂ ಶಿಕ್ಷಕರಿಂದ ಸ್ಪೋಕನ್ ಇಂಗ್ಲಿಷ್ ಕಲಿಸಿಕೊಡಲಾಗುತ್ತದೆ. ಇದೇ ಸಲಹೆಯನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರೂ ನೀಡಿದ್ದು, ಅದನ್ನು ಸ್ವೀಕರಿಸಲಾಗುತ್ತೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳು ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ವ್ಯಾಮೋಹ ಬಹಳಷ್ಟು ಜನರಲ್ಲಿದೆ. ಗುಣಮಟ್ಟ ಹೇಗಾದರೂ ಇರಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು ಎನ್ನುವ ಆಸೆ ಪಾಲಕರಲ್ಲಿ ಇದೆ. ರಾಜ್ಯದಲ್ಲಿನ ಕೆಪಿಎಸ್ ಶಾಲೆಗಳಲ್ಲೂ ಕೂಡ ಇಂಗ್ಲಿಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪಾಲಕರು ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ, ಮಾದರಿ ಶಾಲೆಗಳಲ್ಲಿ ಇಂಗ್ಲಿಷ್ ಸ್ಪೋಕನ್ ಇಂಗ್ಲಿಷ್ ಆಗಿ ಕಲಿಸುವ ಉದ್ದೇಶವಿದೆ’ ಎಂದು ಸಚಿವರು ತಿಳಿಸಿದರು.
ದ್ವಿಭಾಷೆ ಪಠ್ಯ : ಪ್ರಾಥಮಿಕ ಶಾಲಾ ಹಂತದಿಂದಲೇ ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳ ಪಠ್ಯ ಪುಸ್ತಕಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿದೆ. ಹಾಳೆಯ ಒಂದು ಬದಿ ಕನ್ನಡ ಇದ್ದರೆ, ಮತ್ತೊಂದು ಬದಿ ಇಂಗ್ಲಿಷ್ನಲ್ಲಿ ಮುದ್ರಿಸಲಾಗುತ್ತಿದೆ. 1ರಿಂದ 4ನೇ ತರಗತಿವರೆಗೆ ಈ ಎರಡು ವಿಷಯಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತದೆ.
2019-20ರಿಂದ 2021-22ರವರೆಗೆ ಪ್ರತಿ ವರ್ಷ ಒಂದೊಂದು ತರಗತಿಯಂತೆ 1ರಿಂದ 3ನೇ ತರಗತಿವರೆಗೆ ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಿಂದ 1ರಿಂದ4ನೇ ತರಗತಿವರೆಗೆ ಮುದ್ರಿಸಲಾಗುತ್ತಿದೆ. ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯ ಪರಿಚಯ ಆಗಬೇಕು ಎನ್ನುವ ಉದ್ದೇಶವಿದೆ’ ಎಂದರು.
ಸ್ಪರ್ಧಾತ್ಮಕ ಪರೀಕ್ಷೆ : ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸ್ಪರ್ಧಾತ್ಮಕ ಲೋಕದಲ್ಲಿ ಸ್ಪರ್ಧಿಸಲಾಗದು. ಇಂಗ್ಲಿಷ್ನಲ್ಲೇ ಓದಬೇಕು ಎಂಬ ಮಾನಸಿಕತೆ ಜನರಲ್ಲಿ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಶಾಲೆಗಳು ಮುಚ್ಚಿರುವುದು ಕೂಡ ಅದಕ್ಕೆ ಸಾಕ್ಷಿಯಾಗಿದೆ. 47 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಪೈಕಿ 3,800 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ.
ಒಬ್ಬ ವಿದ್ಯಾರ್ಥಿ ಇರುವ 562 ಶಾಲೆಗಳನ್ನು ರಾಜ್ಯ ಸರ್ಕಾರ ನಡೆಸುತ್ತಿದೆ’ ಎಂದ ಸಚಿವರು, ಕನ್ನಡ ಶಾಲೆಗಳ ಉಳಿವಿಗೆ ತಜ್ಞರ ಸಲಹೆಗಳನ್ನು ಸೂಚನೆಗಳನ್ನು ಸ್ವೀಕರಿಸಲಾಗುತ್ತದೆ. ಎಲ್ಲ ಸಲಹೆಗಳನ್ನು ಸ್ವೀಕರಿಸಿ ಕನ್ನಡ ಉಳಿಸಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ನಾಗೇಶ್ ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್. ಭೈರಪ್ಪ, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಮಹಾಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.