ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ನಿಟ್ಟಿನಲ್ಲಿ ಡಿಸೆಂಬರ್ 2, 3 ರಂದು ಎರಡು ದಿನಗಳ ಕಾಲ ನಗರದಾದ್ಯಂತ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳು-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ 27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 9 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ನೋಂದಣಿ ಅಭಿಯಾನವನ್ನು ಬಿಬಿಎಂಪಿಯ ಎಲ್ಲ ಕಂದಾಯ ಅಧಿಕಾರಿಗಳು / ಸಹ ಕಂದಾಯ ಅಧಿಕಾರಿಗಳು / ವಾರ್ಡ್ ಕಚೇರಿಗಳು / ಮತಗಟ್ಟೆಗಳಲ್ಲಿ ಆಯೋಜಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು, ನೋಂದಣಿ ಮಾಡಿಕೊಳ್ಳುವುದರ ಜೊತೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಸಹ ಸ್ವೀಕರಿಸಲಿದ್ದಾರೆ.
ಮತದಾರರು ಈ ವಿಶೇಷ ನೋಂದಣಿ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕುರಿತು (ನಮೂನೆ-6: ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು, ನಮೂನೆ-7: ಮತದಾರರ ಪಟ್ಟಿ ಕುರಿತ ಆಕ್ಷೇಪಣೆ ಹಾಗೂ ನಮೂನೆ-8: ಮತದಾರರ ಚೀಟಿಯಲ್ಲಿನ ಬದಲಾವಣೆ) ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಅಥವಾ ಆನ್‌ಲೈನ್ ಮುಖಾಂತರ ಸ್ವಯಂ ಪ್ರೇರಿತವಾಗಿ ವೆಬ್ ಪೋರ್ಟಲ್: voters.eci.gov.in ಅಥವಾ ವೋಟರ್ ಹೆಲ್ಪ್ಲೈನ್ ಮೊಬೈಲ್ ಆಪ್ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಅವಕಾಶವನ್ನು ಸಾರ್ವಜನಿಕರಿಗೆ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಯುವ ಮತದಾರರನ್ನ ಹೆಚ್ಚು ನೋಂದಣಿ ಮಾಡಿಸಲು ಕ್ರಮ : ದೇಶದ ಸರ್ವತೋಮುಖ ಅಭಿವೃದ್ಧಿಗೆ ಯುವ ಮತದಾರರು ಪ್ರಮುಖ ಪಾತ್ರವಹಿಸಲಿದ್ದು, ದಿನಾಂಕ: 01.01.2024ಕ್ಕೆ 18 ವರ್ಷ ತುಂಬುವ ಎಲ್ಲಾ ಯುವ ಮತದಾರರು ತಮ್ಮ ಹತ್ತಿರದ ಮತಗಟ್ಟೆಗಳ ಬಳಿ ತೆರಳಿ ಫಾರಂ-6ನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಬಹುದು. ಅಥವಾ ವೆಬ್ ಪೋರ್ಟಲ್:- voters.eci.gov.in ಅಥವಾ ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ನಲ್ಲಿ ಸ್ವಯಂ ಪ್ರೇರಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಈಗಾಗಲೇ ನಗರದಲ್ಲಿರುವ ಕಾಲೇಜುಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾಧ್ಯಮ ಸಹಕಾರ ಕೋರಿಕೆ : ನಗರದಲ್ಲಿ ಹಮ್ಮಿಕೊಂಡಿರುವ ವಿಶೇಷ ನೋಂದಣಿ ಅಭಿಯಾನವು ಇದೇ 2023ರ ಡಿಸೆಂಬರ್ 2 ಮತ್ತು 3ನೇ ತಾರೀಖಿನಂದು ನಡೆಯಲಿದ್ದು, ಎಲ್ಲಾ ಮಾಧ್ಯಮದವರೂ ಈ ಅಭಿಯಾನದ ಕುರಿತು ಹೆಚ್ಚು ಪ್ರಚಾರ ಮಾಡಲು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಕೋರಿದ್ದಾರೆ.
ಇದನ್ನೂ ಓದಿ :ಬೆಂಗಳೂರು ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟ