ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ಕುರಿತು ಸುಗಮ ಚರ್ಚೆ ನಡೆಯದ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಇಂದು ಪತ್ರಕರ್ತರ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ ಸ್ಪೀಕರ್, ಕಾಂಗ್ರೆಸ್ನವರ ನಡೆ ಬೇಸರ ತರಿಸಿತು ಎಂದು ಹಲವು ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿಧಾನಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚಿಸಲು ಈ ಹಿಂದೆಯೇ ತೀರ್ಮಾನ ಆಗಿತ್ತು. ಚರ್ಚೆಯಲ್ಲಿ ಭಾಗವಹಿಸಲು, ಕಾಂಗ್ರೆಸ್ನಿಂದ 19 ಸದಸ್ಯರು, ಬಿಜೆಪಿಯಿಂದ 15 ಹಾಗೂ ಜೆಡಿಎಸ್ ನಿಂದ 13 ಮಂದಿ ಸದಸ್ಯರು ಹೆಸರು ಕೊಟ್ಟಿದ್ರು. ಆದರೆ ಈಗ ಕಾಂಗ್ರೆಸ್ನವರು ವಿರೋಧ ಮಾಡ್ತಿದ್ದಾರೆ. ಕಾಂಗ್ರೆಸ್ನವರಿಗೆ ಸಭಾತ್ಯಾಗ ಮಾಡಿ, ಇತರ ಸದಸ್ಯರಿಗೆ ಚರ್ಚಿಸಲು ಅವಕಾಶ ಕೊಡಿ ಎಂದು ಹೇಳಿದ್ದೇವೆ. ಆದರೂ ಕೂಡ ಅವರು ಒಪ್ಪುತ್ತಿಲ್ಲ. ನಾನು ಮತ್ತೆ ಮರಳಿ ಪ್ರಯತ್ನ ಮಾಡುತ್ತೇನೆ ಎಂದರು.
'ಆರ್.ಎಸ್ .ಎಸ್. ಅಜೆಂಡಾ ಅಲ್ಲ'
ಇದು ಪ್ರಧಾನಿ ನರೇಂದ್ರ ಮೋದಿ ಅಥವಾ ಆರ್.ಎಸ್.ಎಸ್. ಅಜೆಂಡಾ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲೇಬೇಕು. ಒಂದು ದೇಶ ಒಂದು ಚುನಾವಣೆ ಬಗ್ಗೆ ನಾವು ಇಲ್ಲಿ ಏನು ಮಾಡುವುದಕ್ಕೂ ಅಧಿಕಾರ ಇಲ್ಲ. ಆದರೆ ಈ ಬಗ್ಗೆ ಚರ್ಚೆ ಮಾಡಿ ಒಂದು ಸ್ವರೂಪ ಕೊಡಬಹುದು. ಅದಕ್ಕಾಗಿ ಇದನ್ನು ಚರ್ಚೆಗೆ ತರಲಾಗಿದೆ ಎಂದು ಹೇಳಿದರು.