ಬೆಂಗಳೂರು:ಉಪ ಚುನಾವಣೆಯಷ್ಟೇ ಕಾವು ವಿಧಾನ ಪರಿಷತ್ನ ಎರಡು ಶಿಕ್ಷಕ ಹಾಗೂ ಎರಡು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲೂ ಇದೆ. ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಚುನಾವಣಾ ಪ್ರಚಾರ ಮತ್ತಷ್ಟು ಬಿರುಸುಗೊಂಡಿದೆ.
ಆಗ್ನೇಯ ಪದವೀಧರರ ಕ್ಷೇತ್ರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಿದ್ದು, ಈ ಕ್ಷೇತ್ರದಲ್ಲಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳೇ ಗೆಲುವು ಕಂಡಿದ್ದಾರೆ. ಕೆಲವೊಮ್ಮೆ ಮಾತ್ರ ಇತರ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಈ ಬಾರಿ ಬಿಜೆಪಿಗೆ ಬಂಡಾಯದ ಬಿಸಿ
ಮೊದಲಿನಿಂದಲೂ ಬಿಜೆಪಿಯಲ್ಲಿ ಈ ಕ್ಷೇತ್ರದ ಟಿಕೆಟ್ಗೆ ಭಾರೀ ಪೈಪೋಟಿ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ಹೆಚ್.ಎಸ್.ಲೇಪಾಕ್ಷ ಪಕ್ಷೇತರರಾಗಿ ಕಣದಲ್ಲಿ ಉಳಿಯುವ ಮೂಲಕ ಬಿಜೆಪಿ ಅಭ್ಯರ್ಥಿಗೆ ತಲೆನೋವಾಗಿದ್ದಾರೆ. ಇನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಕೂಡ ಬಿಜೆಪಿ ಟಿಕೆಟ್ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ್ದರಿಂದ ಅವರೂ ಸಹ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಈ ನಾಯಕರು ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ಲೆಕ್ಕಾಚಾರ ಇತ್ತು. ಆದರೆ ಅದು ಆಗಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ. ಗೌಡ ಅವರಿಗೆ ಬಂಡಾಯದ ಬಿಸಿ ತಾಗುತ್ತಿದೆ.
ಬಿರುಸುಗೊಂಡ ಪ್ರಚಾರ
ಜೆಡಿಎಸ್ ತೊರೆದು ಕೈ ಹಿಡಿದ ರಮೇಶ್ ಬಾಬು ಅವರಿಗೆ ಒಮ್ಮತದ ಅಭ್ಯರ್ಥಿ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಅವರ ಗೆಲುವಿಗೆ ಕೈ ಜೋಡಿಸಿದ್ದಾರೆ. ಇನ್ನು ಕಳೆದ ಬಾರಿ ಗೆಲುವು ಕಂಡಿದ್ದ ಜೆಡಿಎಸ್‌ನ ಆರ್.ಚೌಡರೆಡ್ಡಿ ತೂಪಲ್ಲಿ ಪರವಾಗಿ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಮತ್ತಿತರ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ. ಗೌಡ ಕೂಡ ಸ್ಥಳೀಯ ನಾಯಕರ ಜತೆ ಸೇರಿ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯಮಟ್ಟದ ನಾಯಕರು ವಿಧಾನಸಭೆ ಉಪ ಚುನಾವಣೆಯಲ್ಲಿ ನಿರತರಾಗಿರುವುದರಿಂದ ಯಾರೂ ಭಾಗವಹಿಸಿಲ್ಲ.
ಕ್ಷೇತ್ರದ ವ್ಯಾಪ್ತಿ
ಆಗ್ನೇಯ ಪದವೀಧರ ಕ್ಷೇತ್ರಕ್ಕೆ 5 ಲೋಕಸಭಾ ಕ್ಷೇತ್ರಗಳು, 33 ವಿಧಾನಸಭಾ ಕ್ಷೇತ್ರಗಳು ಸೇರಿವೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಮುಕ್ಕಾಲು ಭಾಗ ಈ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.
ಮತದಾರರೆಷ್ಟು?
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 4 ಇತರ ಮತದಾರರು ಸೇರಿ ಒಟ್ಟು 1,09,129 ಮತದಾರರಿದ್ದು, 68,414 ಪುರುಷರು, 40,711 ಮಹಿಳಾ ಮತದಾರರಿದ್ದಾರೆ.
ಎಲ್ಲೆಲ್ಲಿ ಜಾತಿ ಪ್ರಾಬಲ್ಯ?
ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಜಾತಿ ಮತದಾರರ ಪ್ರಾಬಲ್ಯವಿದೆ. ಚಿಕ್ಕಬಳ್ಳಾಪುರದಲ್ಲಿ ಬಲಿಜ, ಕೋಲಾರದಲ್ಲಿ ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡ, ಚಿತ್ರದುರ್ಗ ಜಿಲ್ಲೆಯಲ್ಲಿ ಯಾದವ, ಪರಿಶಿಷ್ಟ ಜಾತಿ ಮತ್ತು ಪಂಗಡ, ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ, ಲಿಂಗಾಯತ, ಒಬಿಸಿ, ದಾವಣಗೆರೆಯಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಯಾವ ಜಿಲ್ಲೆಯಲ್ಲೂ ಯಾವುದೇ ಸಮುದಾಯದ ಹಿಡಿತವಿಲ್ಲ.