ಕರ್ನಾಟಕ

karnataka

ETV Bharat / state

ಮಹಾಘಟಬಂಧನ್‌ ನಾಯಕರಿಗೆ ಮಧ್ಯಾಹ್ನ ಡಿಕೆಶಿ, ಸಂಜೆ ಸೋನಿಯಾ ಔತಣಕೂಟ - ಈಟಿವಿ ಭಾರತ ಕನ್ನಡ

ಮಹಾಘಟಬಂಧನ್‌ ನಿಮಿತ್ತ ಬೆಂಗಳೂರಿಗೆ ಆಗಮಿಸಿರುವ ವಿವಿಧ ರಾಜ್ಯದ ನಾಯಕರಿಗೆ ಇಂದು ಸಂಜೆ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಔತಣಕೂಟ ಆಯೋಜಿಸಿದ್ದಾರೆ.

ಮಹಾಘಟಬಂಧನ್‌ ನಾಯಕರ ಔತಣಕೂಟ
ಮಹಾಘಟಬಂಧನ್‌ ನಾಯಕರ ಔತಣಕೂಟ

By

Published : Jul 18, 2023, 11:30 AM IST

ಬೆಂಗಳೂರು: ಕೇಂದ್ರ ಪ್ರತಿಪಕ್ಷ ನಾಯಕರು ಬೆಂಗಳೂರು ಮಹಾನಗರದಲ್ಲಿದ್ದು, ಮಹಾಘಟಬಂಧನ್‌ ಸಭೆ ನಡೆಯುತ್ತಿದೆ. ಈ ಸಂದರ್ಭ ನಾಯಕರ ಔತಣಕೂಟ ಸಹ ಗಮನ ಸೆಳೆಯುತ್ತಿದೆ. ರಾಜ್ಯದಲ್ಲಿ ಇಂದು ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು 40ಕ್ಕೂ ಹೆಚ್ಚು ನಾಯಕರು ನಿನ್ನೆಯೇ ನಗರಕ್ಕೆ ಅಗಮಿಸಿದ್ದಾರೆ. ಸಂಜೆ ಒಂದು ಸಣ್ಣ ಸಭೆಯೂ ನಡೆದಿದೆ. ಔಪಚಾರಿಕ ಸಭೆಯ ಬಳಿಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಔತಣಕೂಟ ಆಯೋಜಿಸಿದ್ದರು. ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರು ಈ ಕೂಟದಲ್ಲಿ ಭಾಗಿಯಾಗಿದ್ದರು.

ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಇಂದು ಸಭೆ ನಡೆಯಲಿದ್ದು, ನಿನ್ನೆಯೇ ಹಲವು ನಾಯಕರು ನಗರದ ವಿವಿಧ ಹೋಟೆಲ್‌ಗೆ ಆಗಮಿಸಿ ತಂಗಿದ್ದಾರೆ. ಸಂಜೆ ಸಿದ್ದರಾಮಯ್ಯರ ಔತಣಕೂಟದಲ್ಲಿ ಎಲ್ಲರೂ ಭಾಗಿಯಾಗಿದ್ದರು. ಇಂದು ಬೆಳಗ್ಗೆ 11ಕ್ಕೆ ಮಹಾಘಟಬಂಧನ್‌ ನಾಯಕರ ಸಭೆ ನಡೆಯಲಿದ್ದು, ಮಧ್ಯಾಹ್ನ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಔತಣಕೂಟ ಆಯೋಜಿಸಿದ್ದಾರೆ. ವಿವಿಧ ರಾಜ್ಯಗಳಿಂದ ಅಗಮಿಸಿರುವ ನಾಯಕರಿಗೆ ಮಧ್ಯಾಹ್ನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿಯೇ ಔತಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಮಿಸಿರುವ ಗಣ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ.

ಮಂಗಳವಾರ ಸಂಜೆಯೇ ನಗರಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳುವರು. ನಿನ್ನೆ ಸಂಜೆಯ ಔಪಚಾರಿಕ ಸಭೆ ಹಾಗೂ ಔತಣದಲ್ಲಿಯೂ ಅವರು ಭಾಗಿಯಾಗಿದ್ದರು. ಇಂದು ಸಂಜೆ ಅವರೇ ಔತಣ ಆಯೋಜಿಸಿದ್ದು, ಇದರ ಬಳಿಕ ಮಹಾಘಟಬಂಧನ್‌ ನಾಯಕರು ತಮ್ಮ ರಾಜ್ಯಗಳಿಗೆ ಪ್ರಯಾಣ ಬೆಳೆಸಲಿದ್ದಾರೆ. ನಿನ್ನೆ ಆಗಮಿಸಿರುವ ಎಲ್ಲ ನಾಯಕರನ್ನು ಬರಮಾಡಿಕೊಳ್ಳುವ ಹಾಗೂ ಆತಿಥ್ಯ ಒದಗಿಸುವ ಕಾರ್ಯವನ್ನು ರಾಜ್ಯ ಸರ್ಕಾರದ ಹಿರಿಯ ಸಚಿವರು ನೆರವೇರಿಸಿದ್ದರು. ಖುದ್ದು ಸೋನಿಯಾ, ರಾಹುಲ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಬರಮಾಡಿಕೊಂಡಿದ್ದರು.

ಶಿಷ್ಟಾಚಾರ ಮರೆತ ಸ್ಪೀಕರ್‌, ಉಪಸ್ಪೀಕರ್‌ : ರಾಷ್ಟ್ರೀಯ ಕಾಂಗ್ರೆಸ್‌ ನಾಯಕರು ಆಗಮಿಸಿರುವ ಸಂಭ್ರಮದಲ್ಲಿ ಶಿಷ್ಟಾಚಾರವನ್ನೇ ಮರೆತ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹಾಗೂ ಉಪ ಸ್ಪೀಕರ್‌ ರುದ್ರಪ್ಪ ಲಮಾಣಿ ನೇರವಾಗಿ ಖಾಸಗಿ ಹೋಟೆಲ್‌ಗೆ ತೆರಳಿ ತಮ್ಮ ನಾಯಕರನ್ನು ಭೇಟಿಯಾಗಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಇಂದು ಮಧ್ಯಾಹ್ನ ನಡೆಯುವ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಬಂದಿರುವ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಸೇರಿದಂತೆ ಎಐಸಿಸಿ ನಾಯಕರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭೇಟಿ ಮಾಡಿರುವುದು ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷದಿಂದ ಹೊರಗಿದ್ದು ಸಭಾಧ್ಯಕ್ಷ ಮತ್ತು ಉಪಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಇವರು ಯಾವುದೇ ಕಾರಣಕ್ಕೂ ತಮ್ಮ ನಾಯಕರ ಭೇಟಿಗೆ ತೆರಳುವುದು ಶಿಷ್ಟಾಚಾರ ಉಲ್ಲಂಘನೆ. ಇದನ್ನು ಮರೆತ ಖಾದರ್ ಮತ್ತು ಲಮಾಣಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ಸಚಿವರಾದ ಜಿ. ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ದಿನೇಶ್ ಗುಂಡೂರಾವ್, ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಕೂಡಾ ಎಐಸಿಸಿ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿಂದು 2ನೇ ದಿನದ ಪ್ರತಿಪಕ್ಷಗಳ ಮಹಾಘಟಬಂಧನ್‌ ಸಭೆ; 48 ನಾಯಕರು ಭಾಗವಹಿಸುವ ನಿರೀಕ್ಷೆ

ABOUT THE AUTHOR

...view details