ಬೆಂಗಳೂರು:ರಾಜ್ಯದಲ್ಲಿ ಈಗ ಕರ್ಫ್ಯೂ ಹೇರಿಕೆ ಮಾಡಿರುವುದರಿಂದ ದುಡಿಯುವ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಉತ್ತರ ಕರ್ನಾಟಕವೂ ಸೇರಿದಂತೆ ಅನೇಕ ಜಿಲ್ಲೆಗಳ ಜನ ಬೇಸಿಗೆಯಲ್ಲಿ ನಗರಗಳಿಗೆ ವಲಸೆ ಹೋಗಿ ಕೂಲಿ ನಾಲಿ ಮಾಡಿ ಒಂದಿಷ್ಟು ಹಣ ಸಂಪಾದಿಸಿ ಅದನ್ನು ಮುಂಗಾರಿನ ಕೃಷಿ ಕೆಲಸಗಳಿಗೆ ವಿನಿಯೋಗಿಸುತ್ತಾರೆ. ಈಗ ಕರ್ಫ್ಯೂ ಹೇರಿಕೆ ಮಾಡಿರುವುದರಿಂದ ಅವರ ದುಡಿಮೆ ಸಂಪೂರ್ಣ ಹಾಳಾಗಿದೆ. ದುಡಿಯಲೆಂದು ಬಂದವರು ಮರಳಿ ವಾಪಸ್ ಹೋಗಿದ್ದಾರೆ. ಆದ್ದರಿಂದ ಸರ್ಕಾರ ಈ ಎಲ್ಲ ರೈತಾಪಿ ಕುಟುಂಬಗಳಿಗೆ ಬೀಜ, ಗೊಬ್ಬರ, ಔಷಧ ಮುಂತಾದವುಗಳನ್ನು ಉಚಿತವಾಗಿ ವಿತರಿಸಬೇಕು. ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿಪಿಎಲ್ ವರ್ಗಕ್ಕೆ ಸೇರಿದ ಕುಟುಂಬಗಳಿವೆ. ಈ ಕುಟುಂಬಗಳಿಗೆ ಸೇರಿದ ಬಹುಪಾಲು ಜನರು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಖ್ಯೆ ಸುಮಾರು 1.5 ಕೋಟಿಗಳಷ್ಟಿದೆ. ಎಲ್ಲ ದುಡಿಯುವ ವರ್ಗಗಳು, ಸಮುದಾಯಗಳು ಹಾಗೂ ಬಿಪಿಎಲ್ ವರ್ಗದಡಿ ಬರುವ ಕುಟುಂಬಗಳು ದುಡಿಮೆ ಇಲ್ಲದೆ ಆರ್ಥಿಕ ಚೈತನ್ಯ ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಅವರೆಲ್ಲರಿಗೂ ಪ್ರತಿ ತಿಂಗಳು ಕನಿಷ್ಠ 10,000 ರೂಪಾಯಿಗಳ ಆರ್ಥಿಕ ಪ್ಯಾಕೇಜನ್ನು ಈ ಕೂಡಲೇ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 87 ಲಕ್ಷ ರೈತಾಪಿ ಕುಟುಂಬಗಳಿವೆ. ರೈತರಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಿಡುವಳಿಗಳನ್ನು ಹೊಂದಿರುವ ಕಟುಂಬಗಳು ಶೇ. 90ರಷ್ಟಿವೆ. ಬಹುಪಾಲು ಈ ಕುಟುಂಬಗಳೂ ಸಹ ಬಿಪಿಎಲ್ ವರ್ಗದಡಿಯೇ ಇವೆ. ಹಾಗಾಗಿ ಈ ರೈತಾಪಿ ಕುಟುಂಬಗಳಿಗೂ ಸಹ ತಿಂಗಳಿಗೆ 10,000 ರೂ.ಗಳ ಪ್ಯಾಕೇಜ್ ಘೋಷಿಸಬೇಕು. ರಾಜ್ಯದ ಕೃಷಿಕರು ಸಂಕಷ್ಟದಲ್ಲಿರುವುದರಿಂದ ಅವರಿಗೆ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳ ಮೂಲಕ ಬಡ್ಡಿ ರಹಿತ ಕೃಷಿ ಸಾಲಗಳನ್ನು ಕನಿಷ್ಠ 5 ಲಕ್ಷ ರೂ.ಗಳವರೆಗೆ ನೀಡಬೇಕು. ಇದನ್ನು ಮಾಡುವುದು ಕಷ್ಟದ ವಿಚಾರವೇನೂ ಅಲ್ಲ. ದೇಶದ ದೊಡ್ಡ ದೊಡ್ಡ ಕಾರ್ಪೋರೇಟ್ ಕುಳಗಳಿಗೆ ಸಂಬಂಧಿಸಿದ ಸುಮಾರು 10.5 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ವಸೂಲು ಮಾಡದೆ ಕೈ ಬಿಡಲಾಗಿದೆ. ಅಂಥದ್ದರಲ್ಲಿ ರೈತಾಪಿವರ್ಗಗಳಿಗೆ ನೀಡುವ ಕೆಲವು ಸಾವಿರ ಕೋಟಿಗಳಷ್ಟು ಬಡ್ಡಿ ರಹಿತ ಸಾಲದಿಂದ ದೇಶದ ಆರ್ಥಿಕತೆ ಮುಳುಗಿ ಹೋಗುವುದಿಲ್ಲ. ಬದಲಿಗೆ ಆರ್ಥಿಕತೆ ಸುಧಾರಣೆಯಾಗುತ್ತದೆ. ಆದ್ದರಿಂದ ಬಡ್ಡಿ ರಹಿತ ಸಾಲವನ್ನು ನೀಡಿ ರೈತರ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ರಿಯಾಯಿತಿ ದರಗಳಲ್ಲಿ ಸಾಧ್ಯವಾದರೆ ಉಚಿತವಾಗಿ ರಸಗೊಬ್ಬರಗಳನ್ನು ವಿತರಿಸಬೇಕು. ನಗರಗಳಿಂದ ಗ್ರಾಮಗಳಿಗೆ ವಲಸೆ ಹೊರಟ ಕಾರ್ಮಿಕರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ [ನರೇಗಾ] ಕನಿಷ್ಠ 150 ಮಾನವ ದಿನಗಳಷ್ಟು ಮತ್ತು ಅದಕ್ಕೂ ಹೆಚ್ಚು ಬೇಡಿಕೆ ಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕು. ಹಿಂದೆ ನಿಮ್ಮದೇ ಸರ್ಕಾರವಿದ್ದಾಗ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 150 ಮಾನವ ದಿನಗಳಿಗೆ ಹೆಚ್ಚಿಸಿ ಎಂದಾಗ ಅವರು ಅದಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಿದ್ದರು. ಈಗಲೂ ರಾಜ್ಯ ಸರ್ಕಾರ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ರಾಜ್ಯದ ಬಿಜೆಪಿ ಸಂಸದರುಗಳು ಈ ಕುರಿತು ಪ್ರಧಾನಿಗಳನ್ನು ಒತ್ತಾಯ ಮಾಡಿ ರಾಜ್ಯದ ಜನರ ನೆರವಿಗೆ ನಿಲ್ಲಬೇಕು ಎಂದು ತಿಳಿಸಿದ್ದಾರೆ.