ಬೆಂಗಳೂರು: ಪಠ್ಯಕ್ರಮದಿಂದ ಟಿಪ್ಪು ವಿಚಾರ ತೆಗೆದುಹಾಕುವ ಸರ್ಕಾರದ ಚಿಂತನೆ ಹಾಗೂ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಪರಿಹಾರ ವಿತರಿಸಿದ್ದೇವೆ ಎಂದು ಹೇಳಿಕೊಂಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಟೀಕಿಸಿದ್ದಾರೆ.
ಬಿಜೆಪಿ ಹಾಗೂ ಸಿಎಂ ನಡೆಗೆ ಸಿದ್ದರಾಮಯ್ಯ ಟ್ವೀಟಾಸ್ತ್ರ..! - ಸಿಎಂ ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಟ್ವೀಟ್
ಟಿಪ್ಪು ಪಠ್ಯವನ್ನು ತೆಗೆಯುವ ಹಾಗೂ ಪ್ರವಾಹ ಸಂತ್ರಸ್ತರ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ್ದು, ಕೆಲ ದಿನಗಳ ಹಿಂದೆ ಜಮಖಂಡಿಯ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಸಂತ್ರಸ್ತರ ಬಳಿಯೇ ಯಡಿಯೂರಪ್ಪನವರು ಹೇಳುತ್ತಿರುವ ಹಾಗೆ ಪರಿಹಾರದ ಹಣ ನಿಮಗೆ ಸಿಕ್ಕಿದೆಯೇ, ಪುನರ್ವಸತಿ ಕಾರ್ಯ ಚಾಲನೆಯಲ್ಲಿದೆಯೇ, ಊಟ, ಆಶ್ರಯ, ಔಷಧೋಪಚಾರ ದೊರೆಯುತ್ತಿದೆಯೇ ಎಂದು ಪ್ರಶ್ನಿಸಿದೆ. ಅಲ್ಲಿನ ಜನರೇ ಯಡಿಯೂರಪ್ಪ ಹೇಳುತ್ತಿರುವುದು ಪೂರ್ತಿ ಸುಳ್ಳು ಎಂದರು ಎಂದಿದ್ದಾರೆ.
ಸಾವಿರಾರು ಮಂದಿ ರಸ್ತೆಯಲ್ಲಿದ್ದಾರೆ ನಿತ್ಯ ಮಾಧ್ಯಮಗಳಲ್ಲಿ ಪ್ರವಾಹ ಸಂತ್ರಸ್ತರ ಸಂಕಷ್ಟಗಳು ಅನಾವರಣಗೊಳ್ಳುತ್ತಿದೆ. ಸಾವಿರಾರು ಮಂದಿ ಸೂರಿಲ್ಲದೆ ರಸ್ತೆಯಲ್ಲಿದ್ದಾರೆ, ರೈತರ ಆತ್ಮಹತ್ಯೆ, ಅರೋಗ್ಯ ಸೌಲಭ್ಯದ ಕೊರತೆಯ ಬಗ್ಗೆ ವರದಿ ಪ್ರಕಟವಾಗುತ್ತಿದೆ. ಯಡಿಯೂರಪ್ಪನವರು ಹೇಳುತ್ತಿರುವುದೆಲ್ಲ ಸತ್ಯವಾಗಿದ್ದರೆ, ಪತ್ರಿಕೆಗಳು ಸುಳ್ಳು ಸುದ್ದಿ ಪ್ರಕಟಿಸುತ್ತಿವೆ ಎಂದಾಗುತ್ತದೆಯಲ್ಲವೇ..? ಬಾದಾಮಿಯ 43 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ, ತಾಲ್ಲೂಕಿನ ತಹಶಿಲ್ದಾರರು, ಇತರೆ ಅಧಿಕಾರಿಗಳು ಹಾಗೂ ಜನರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಅಧಿಕಾರಿಗಳು ಮತ್ತು ಜನರು ಪರಿಹಾರದ ರೂಪದಲ್ಲಿ ಏನೇನು ಬಂದಿದೆ, ಏನೇನು ಬಂದಿಲ್ಲ ಎಂದು ಹೇಳಿದ್ದಾರೆ ಅದನ್ನು ನಾನು ಮಾಧ್ಯಮಗಳ ಮುಂದೆ ಹೇಳಿದ್ದೇನೆ ಅಷ್ಟೆ. ಗೊಂದಲ ಸೃಷ್ಟಿಸುವ ಅಗತ್ಯ ನನಗಿಲ್ಲ ಎಂದಿದ್ದಾರೆ.