ಬೆಂಗಳೂರು:ಉತ್ತರ ಪ್ರದೇಶದ ಹಥ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬಸ್ಥರನ್ನ ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಬಿಡುಗಡೆ ಮಾಡಿದ್ದಾರೆ.
ಹಥ್ರಾಸ್ ಸಂತ್ರಸ್ತೆ ಮನೆಗೆ ಭೇಟಿ ನೀಡಲು ಹೊರಟಿದ್ದ ರಾಹುಲ್, ಪ್ರಿಯಾಂಕಾ ಪೊಲೀಸರ ವಶಕ್ಕೆ
ನವದೆಹಲಿಯಿಂದ ತೆರಳಿದ್ದ ಅವರನ್ನ ಯಮುನಾ ಎಕ್ಸ್‌ಪ್ರೆಸ್ ಹೈವೇ ಬಳಿ ತಡೆದ ಪೊಲೀಸರು, ಮುಂದೆ ಹೋಗದಂತೆ ಘೇರಾವ್ ಹಾಕಿದ್ದಾರೆ. ಈ ವೇಳೆ, ರಾಹುಲ್ ಗಾಂಧಿ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಪೊಲೀಸ್ ರಾಜ್ಯದಲ್ಲಿ ಸಂಸದ ರಾಹುಲ್ ಗಾಂಧಿ ಹಾಗೂ ನಮ್ಮ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರೇ ಸುರಕ್ಷಿತರಲ್ಲ ಎಂದ ಮೇಲೆ ಅಲ್ಲಿನ ದಲಿತರು, ಮಹಿಳೆಯರು, ರೈತರು,ಕಾರ್ಮಿಕರು ಹೇಗೆ ಸುರಕ್ಷಿತರಾಗಿರಲು ಸಾಧ್ಯ?
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನ ಬಂಧನ ಮಾಡಿರುವುದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದ ಬಣ್ಣ ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಆ ಕುಟುಂಬದ ಭೇಟಿಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದಿದ್ದಾರೆ.