ಕರ್ನಾಟಕ

karnataka

ETV Bharat / state

ಉಚಿತ ಭರವಸೆ ಮೂಲಕ ಬಿಜೆಪಿ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ: ಸಿದ್ದರಾಮಯ್ಯ - siddaramaiah speech

ಕಾಂಗ್ರೆಸ್ ಪಕ್ಷ ತನ್ನ ರಾಜ್ಯಾದ್ಯಂತ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್​ಗಳನ್ನು ಮುಚ್ಚಿರುವ ಬಿಜೆಪಿ ಈಗ ಅಟಲ್ ಆಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿರುವುದೇ ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

siddaramaiah-reacts-to-the-release-of-bjp-manifesto
ಉಚಿತ ಭರವಸೆ ಮೂಲಕ ಬಿಜೆಪಿ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ: ಸಿದ್ದರಾಮಯ್ಯ

By

Published : May 1, 2023, 6:46 PM IST

ಬೆಂಗಳೂರು:ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ "ಜನತಾ ಪ್ರಣಾಳಿಕೆ" ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ಈ ಪ್ರಣಾಳಿಕೆಯನ್ನು ಜನತೆಯೇ ಅನುಷ್ಠಾನಕ್ಕೆ ತರಬೇಕೇ ಹೊರತು ಸರ್ಕಾರ ಅಲ್ಲ ಎನ್ನುವುದೇ ಇದರ ಅರ್ಥವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅನ್ನ, ಅಭಯ, ಅಕ್ಷರ, ಅಭಿವೃದ್ಧಿ ಮತ್ತು ಆದಾಯಗಳ ಭರವಸೆಗಳನ್ನು ನೀಡಿದೆ. ಕಳೆದ ಮೂರುವರೆ ವರ್ಷಗಳ ಅವಧಿಯ ರಾಜ್ಯದ ಬಿಜೆಪಿ ಸರ್ಕಾರ ಈ ಐದು ಭರವಸೆಗಳನ್ನು ಜನರಿಂದ ಕಸಿದುಕೊಂಡಿದೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ 40 ಪರ್ಸೆಂಟ್​​​ ಕಮಿಷನ್ ಹಾವಳಿಯ ಮೂಲಕ ಅಭಿವೃದ್ಧಿಯನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಗೃಹ ಸಚಿವರ ಅದಕ್ಷತೆ ಮತ್ತು ಭ್ರಷ್ಟತೆಯಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಮಾತ್ರವಲ್ಲ, ರೌಡಿ-ಗೂಂಡಾಗಳೆಲ್ಲ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಪಡೆದಿರುವ ಕಾರಣ ಜನತೆಯ ಭದ್ರತೆಯ ಅಭಯವನ್ನೂ ಕಸಿದುಕೊಂಡಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ರೂ.410 ರಿಂದ ರೂ.1105ಕ್ಕೆ ಏರಿಸಿರುವ ಮತ್ತು ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿರುವ ಬಿಜೆಪಿ ಈಗ ಅಡುಗೆ ಅನಿಲದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡುವ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಾವಧಿಯಲ್ಲಿ ರಾಜ್ಯಾದ್ಯಂತ ಪ್ರಾರಂಭಿಸಿದ್ದ 600 ಇಂದಿರಾ ಕ್ಯಾಂಟೀನ್​ಗಳನ್ನು ರಾಜಕೀಯ ದ್ವೇಷಾಸೂಯೆಯಿಂದ ಮುಚ್ಚಿರುವ ಬಿಜೆಪಿ ಈಗ ಅಟಲ್ ಆಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿರುವುದೇ ಹಾಸ್ಯಾಸ್ಪದ. ಪಡಿತರ ಚೀಟಿಗಳ ಮೂಲಕ ನೀಡಲಾಗುತ್ತಿದ್ದ ಏಳು ಕಿಲೋ ಉಚಿತ ಅಕ್ಕಿಯನ್ನು ಐದು ಕಿಲೋಗೆ ಇಳಿಸಿದ್ದ ಬಿಜೆಪಿ ಐದು ಕಿಲೋ ಸಿರಿಧಾನ್ಯ ಕೊಡುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿಪರ್ಯಾಸ.

ಹತ್ತು ಲಕ್ಷ ನಿವೇಶನಗಳನ್ನು ವಿತರಿಸುವ ಭರವಸೆ ನೀಡಿರುವ ಇದೇ ಬಿಜೆಪಿ ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ಒಂದೇ ಒಂದು ಹೊಸಮನೆಯನ್ನು ನಿರ್ಮಾಣ ಮಾಡಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ಬಿಜೆಪಿ ಸರ್ಕಾರ ನಿರ್ಮಾಣ ಹಂತದಲ್ಲಿದ್ದ ನಮ್ಮ ಕಾಲದ ಮನೆಗಳನ್ನು ಪೂರ್ಣಗೊಳಿಸಿ ಅದನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಸಣ್ಣ ಕೈಗಾರಿಕೆಗಳು ಮತ್ತು ಐಟಿಐಗಳ ನಡುವೆ ಒಪ್ಪಂದ ಮಾಡಿಕೊಂಡು ಯುವ ಪ್ರತಿಭೆಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಕಲ್ಪಿಸುವ 'ಸಮನ್ವಯ' ಯೋಜನೆಯ ಭರವಸೆಯನ್ನು ಬಿಜೆಪಿ ನೀಡಿದೆ. 2019-2022ರ ನಡುವಿನ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇಕಡಾ 22.9ರಷ್ಟು ಹೆಚ್ಚಾಗಿದೆ. 2021ರ ಅವಧಿಯಲ್ಲಿ ರಾಜ್ಯದಲ್ಲಿ ನಿರುದ್ಯೋಗದ ಕಾರಣದಿಂದಾಗಿ 1,129 ಯುವಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ 1258 ಕಂಪನಿಗಳು ರಾಜ್ಯದಲ್ಲಿ ಮುಚ್ಚಿ 60,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರದ 13 ಉದ್ಯಮಗಳು ಮುಚ್ಚಿವೆ. ಈ ಅನಾಹುತಗಳಿಗೆಲ್ಲ ಕಾರಣವಾದ ಬಿಜೆಪಿ ಈಗ ಸಮನ್ವಯ ಎಂಬ ಹೊಸ ಯೋಜನೆಯ ಭರವಸೆಯನ್ನು ನೀಡಿದರೆ ನಂಬುವವರು ಯಾರು? ಐಎಎಸ್/ಕೆಎಎಸ್/ಬ್ಯಾಂಕಿಂಗ್/ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಪರೀಕ್ಷಾ ತಯಾರಿಯ ಕೋಚಿಂಗ್ ಪಡೆಯಲು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ.

ಕಳೆದ ಮೂರುವರೆ ವರ್ಷಗಳಲ್ಲಿ ಪಿಎಸ್‌ಐ, ಕೆಪಿಟಿಸಿಎಲ್ ನೇಮಕಾತಿ ಸೇರಿದಂತೆ ಉದ್ಯೋಗ ನೇಮಕಾತಿಯ ಎಲ್ಲ ನಿರ್ಧಾರಗಳು ಅಂತಿಮವಾಗಿ ಲಂಚ/ಕಮಿಷನ್ ಪಡೆದಿರುವ ಹಗರಣಗಳಾಗಿವೆ. ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 400 "ನಮ್ಮ ಕ್ಲಿನಿಕ್"ಗಳನ್ನು ತೆರೆಯಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಯೋಜನೆಯನ್ನು 2022-23ರ ಬಜೆಟ್​​ನಲ್ಲಿ ಬಿಜೆಪಿ ಸರ್ಕಾರ ಘೋಷಿಸಲಾಗಿದ್ದರೂ ಇಲ್ಲಿಯವರೆಗೆ ನೂರು "ನಮ್ಮ ಕ್ಲಿನಿಕ್" ಗಳನ್ನು ತೆರೆದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ:ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ.. 110 ಕ್ಷೇತ್ರದಲ್ಲಿ ಪ್ರಜಾಕೀಯ ಸ್ಪರ್ಧೆ - ಉಪೇಂದ್ರ ಮಾಹಿತಿ

ABOUT THE AUTHOR

...view details