ಬೆಂಗಳೂರು:ರಾಜ್ಯದಲ್ಲಿ ಅಮುಲ್ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಲು ಕನ್ನಡಿಗರು ಕಟ್ಟಿ ಬೆಳೆಸಿರುವ, ರಾಜ್ಯದ ಗ್ರಾಮೀಣ ಜನರ ಜೀವನಾಧಾರದಂತಿರುವ ಕೆಎಂಎಫ್ ಅನ್ನು ಮುಳಗಿಸಲು ಬಿಜೆಪಿ ಸರ್ಕಾರಗಳು ಹೊರಟಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು "ರಾಜ್ಯದ ಮಾರುಕಟ್ಟೆಯಿಂದ ಗೌರವಯುತವಾಗಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ನಮ್ಮ ವಿಜಯಾ ಬ್ಯಾಂಕ್ನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ನದ್ದು. ಬಂದರು, ಏರ್ಪೋರ್ಟ್ ನುಂಗಿದ್ದ ಅದಾನಿ ಗುಜರಾತ್ನವರು. ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಗುಜರಾತ್ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ"? ಎಂದು ಪ್ರಶ್ನಿಸಿದ್ದಾರೆ.
ರೈತರ ಹೊಟ್ಟೆಗೆ ಹೊಡೆಯುವ ಹುನ್ನಾರವೇ?: ''ಈ ಗುಜರಾತಿ ಆಕ್ರಮಣ ಇನ್ನು ಸಹಿಸಲು ಸಾಧ್ಯ ಇಲ್ಲ. ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಗೌರವ ಪೂರ್ವಕವಾಗಿ ನಿಲ್ಲಿಸಿ. ಕನ್ನಡಿಗರ ನಾಡಪ್ರೇಮ, ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ. ಪರಿಣಾಮ ನೆಟ್ಟಗಾಗದು. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಅಮುಲ್ ಜತೆ ಕೆಎಂಎಫ್ ವಿಲೀನದ ಪ್ರಸ್ತಾವ ಮಾಡಿದ ದಿನದಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಪ್ರಹಾರ ಶುರುವಾಗಿದೆ. ಏನಿದು ನಿಮ್ಮ ಕರಾಮತ್ತು?. ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಿಂದ ನಂದಿನಿ ಹಾಲು ಮತ್ತಿತರ ಉತ್ಪನ್ನಗಳು ಮಾಯವಾಗುತ್ತಿವೆ. ಗುಜರಾತ್ ನಿಂದ ನೀವು ಕಳುಹಿಸುತ್ತಿರುವ ಅಮುಲ್ ಹಾಲು ಮತ್ತು ಉತ್ಪನ್ನಗಳ ಮಾರಾಟದ ಬಿರುಸು ಹೆಚ್ಚಾಗಿದೆ. ಇವೆಲ್ಲವೂ ಸಹಜ ಬೆಳವಣಿಗೆಯೇ?. ಭರವಸೆ ನೀಡಿದಂತೆ ಯುವಜನರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡಲಿಲ್ಲ, ಬದಲಿಗೆ ನಮ್ಮ ಬ್ಯಾಂಕ್, ಬಂದರು, ವಿಮಾನ ನಿಲ್ದಾಣಗಳಲ್ಲಿನ ಕನ್ನಡಿಗರ ಉದ್ಯೋಗಗಳನ್ನು ಕಿತ್ತುಕೊಂಡಾಯಿತು. ಈಗ ರೈತರ ಹೊಟ್ಟೆಗೆ ಹೊಡೆಯುವ ಹುನ್ನಾರವೇ?'' ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಇದನ್ನೂ ಓದಿ:ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಂದಿನಿ ಬಗ್ಗೆ ಕೆಲವರಿಂದ ಅಪಪ್ರಚಾರ: ಕೇಂದ್ರ ಸಚಿವೆ ಕರಂದ್ಲಾಜೆ
''ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಕ್ಷೀರಧಾರೆ ಮತ್ತು ಕ್ಷೀರಭಾಗ್ಯ ಯೋಜನೆಗಳು ಅನ್ನಭಾಗ್ಯ ಯೋಜನೆಯ ರೀತಿಯಲ್ಲಿಯೇ ನನಗೆ ಸಂತೃಪ್ತಿ ತಂದ ಯೋಜನೆಗಳು. ಗೋಭಕ್ತಿ ಎಂದರೆ ಗೋಮಾಂಸ ಮಾರಾಟಕ್ಕೆ ಲೈಸೆನ್ಸ್ ಕೊಡುವುದೇ ಮೋದಿ ಜೀ?. ಹಾಲಿನ ಸಬ್ಸಿಡಿಯನ್ನು ಲೀ. 5 ರೂ.ಹೆಚ್ಚಿಸಿ ನಾನು ಕ್ಷೀರಧಾರೆ ಯೋಜನೆ ಜಾರಿಗೊಳಿಸಿದ್ದೆ. ಇದರಿಂದಾಗಿ 20-12-2013 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು.