ಕರ್ನಾಟಕ

karnataka

ETV Bharat / state

ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದಿಂದ ತೌಡು ಕುಟ್ಟುವ ಕೆಲಸವಾಗಿದೆ: ಸಿದ್ದರಾಮಯ್ಯ ವಾಗ್ದಾಳಿ - ನಳಿನ್ ಕುಮಾರ್ ಕಟೀಲ್

ರಾಜ್ಯಪಾಲರ ಭಾಷಣಕ್ಕೆ ತೀವ್ರ ಅಸಮಾಧಾನ - ಸಂಪೂರ್ಣ ಭಾಷಣದಲ್ಲಿ ಸರ್ಕಾರದ ಕುರಿತು ಸುಳ್ಳುಗಳನ್ನೇ ಹೆಚ್ಚು ಹೇಳಿಸಲಾಗಿದೆ - ಬಿಜೆಪಿ ಸರ್ಕಾರದ ವಿರುದ್ಧ ವಾಕ್ ಸಮರ ನಡೆಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

Siddaramaiah
ಸಿದ್ದರಾಮಯ್ಯ

By

Published : Feb 14, 2023, 4:34 PM IST

ಬೆಂಗಳೂರು:''ನನ್ನ ರಾಜಕೀಯ ಜೀವನದ 40 ವರ್ಷಗಳಲ್ಲಿ ಇಷ್ಟೊಂದು ಕೆಟ್ಟ ಭಾಷಣವನ್ನು ಹಿಂದೆಂದೂ ಕೇಳಿರಲೇ ಇಲ್ಲ. ಅವರ ಇಡೀ ಭಾಷಣದಲ್ಲಿ ಸರ್ಕಾರವು ಸುಳ್ಳನ್ನು ಹೇಳಿಸಿದೆ'' ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ''ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸುಮಾರು 82 ಪ್ಯಾರಾಗಳಿರುವ ಅವರ ಭಾಷಣ ನೋಡಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿನ ರಾಜಭವನಗಳು ವಿವಾದದ ಕೇಂದ್ರಗಳಾಗಿವೆ.

ಆದರೆ, ಕರ್ನಾಟಕದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಯಾವುದೇ ವಿವಾದದ ಸುಳಿಗೆ ಸಿಕ್ಕಿಹಾಕಿಕೊಳ್ಳದೇ ರಾಜಭವನದ ಗೌರವ, ಘನತೆಯನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ತೌಡು ಕುಟ್ಟಿದರೆ ಏನು ಫಲ?: ''ರಾಜ್ಯಪಾಲರ ಭಾಷಣವನ್ನು ರಾಜ್ಯಪಾಲರು ಸಿದ್ಧಪಡಿಸಿಕೊಳ್ಳುವುದಿಲ್ಲ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಅವರು ಓದುವುದು ಸಂಪ್ರದಾಯವಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ, ಅದು ಸುಳ್ಳನ್ನೇ ಜಾಸ್ತಿ ಹೇಳಿದೆ. ಆಗಾಗ ಮಾತ್ರ ಸತ್ಯ ಹೇಳುತ್ತಾರೆ ಅಷ್ಟೆ. ವಸ್ತುಸ್ಥಿತಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟ ಇರಬೇಕು.

ಕಳೆದ 4 ವರ್ಷಗಳ ಸಾಧನೆಗಳನ್ನು, ರಾಜ್ಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ರಾಜ್ಯಪಾಲದ ಭಾಷಣದಲ್ಲಿ ಹೇಳಿಸಬೇಕಿತ್ತು. ಇದರ ಜೊತೆಗೆ ಮುನ್ನೋಟವೂ ಇರಬೇಕಿತ್ತು. ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟವಿದ್ದು, ಬರೀ ಸುಳ್ಳುಗಳೇ ಇವೆ. ಮುನ್ನೋಟ ಇರಲೇ ಇಲ್ಲ. ಸರ್ಕಾರವು ತೌಡು ಕುಟ್ಟುವ ಕೆಲಸ ಮಾಡಿದೆ. ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ಆದರೆ, ತೌಡು ಕುಟ್ಟಿದರೆ ಏನು ಫಲ?'' ಎಂದು ವ್ಯಂಗ್ಯವಾಡಿದರು.

ರಾಜ್ಯಪಾಲರ ಭಾಷಣದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಏನು ಹೇಳಿತ್ತು. ಅದರಲ್ಲಿ ಎಷ್ಟು ಈಡೇರಿಸಿದೆ ಎಂಬುದನ್ನು ಹೇಳಬೇಕಿತ್ತು. 2018ರಲ್ಲಿ ಬಿಜೆಪಿ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿತ್ತು. ಅದರಲ್ಲಿ ಈವರೆಗೆ 50 ರಿಂದ 60 ಭರವಸೆಗಳನ್ನು ಕೂಡ ಪೂರ್ಣವಾಗಿ ಈಡೇರಿಸಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಬಡವರ, ರೈತರ, ಅವಕಾಶ ವಂಚಿತರ ಧ್ವನಿಯಾಗಿ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ. ವಾಸ್ತವದಲ್ಲಿ ಈ ವರ್ಗದ ಜನರ ಪರವಾಗಿ ಸರ್ಕಾರ ಕೆಲಸ ಮಾಡಿಲ್ಲ ಎಂಬುದು ನನ್ನ ಅನಿಸಿಕೆ'' ಎಂದರು.

ಕನಿಷ್ಠ ಬೆಂಬಲ ಬೆಲೆ ಯೋಜನೆ:''ಬಿಜೆಪಿ ಪ್ರಣಾಳಿಕೆಯ ಕೆಲವು ಮುಖ್ಯ ಭರವಸೆಗಳನ್ನು ನೆನಪು ಮಾಡಿದ ಸಿದ್ದರಾಮಯ್ಯ ಅವರು, ''ನಮ್ಮ ಸರ್ಕಾರದ ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಇರುವ 1 ಲಕ್ಷದವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ಇದರ ಈಡೇರಿಕೆ ಆಗಿದೆಯಾ? 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣಭೂಮಿ ರೈತರಿಗೆ ತಲಾ 10,000 ರೂ. ಆರ್ಥಿಕ ನೆರವು ನೀಡಲಿದ್ದೇವೆ ಎಂದಿದ್ದರು, ಇದನ್ನೂ ಈಡೇರಿಸಿಲ್ಲ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರ ಬೆಳೆಯ ಒಂದೂವರೆ ಪಟ್ಟು ಆದಾಯ ನೀಡಲಾಗುವುದು. ಬೆಳೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ 5,000 ಕೋಟಿ ರೂ. ರೈತಬಂಧು ಆವರ್ತನಿಧಿಯನ್ನು ಸ್ಥಾಪನೆ ಮಾಡಲಾಗುವುದು ಎಂದಿದ್ದರು. ಆದರೆ ಯಾವುದೂ ಆಗಿಲ್ಲ'' ಎಂದು ಟೀಕಿಸಿದರು.

ರೈತರ ಸಾಲದ ಹೊರೆ ಕಡಿಮೆ ಮಾಡಿ:''ಬಿಜೆಪಿ ಯಾವೊಂದು ಭರವಸೆಯನ್ನು ಈಡೇರಿಸಿಲ್ಲ. ಹೀಗಾದರೆ, ರೈತರ ಆದಾಯ ದುಪ್ಪಟ್ಟು ಆಗುವುದು ಹೇಗೆ? ಇದನ್ನೇ ನಾನು ಸುಳ್ಳು ಭಾಷಣ. ರೈತರ ಸಾಲವನ್ನು ಒಂದು ರೂಪಾಯಿ ಕೂಡ ಮನ್ನಾ ಮಾಡುವ ಕೆಲಸ ಮಾಡಿಲ್ಲ. ಹಿಂದೆ ಸಾಲ ಮನ್ನಾ ಮಾಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಅದರಲ್ಲಿ ದಾಖಲೆ ನೀಡದೇ ಉಳಿದುಕೊಂಡ ಕೆಲವು ರೈತರ ಸಾಲ ಮನ್ನಾವನ್ನು ಈ ಸರ್ಕಾರ ಪೂರ್ಣಗೊಳಿಸುವ ಕೆಲಸ ಮಾಡಿದೆಯಾ? ರೈತರು ನಮ್ಮ ಸಾಲದ ಹೊರೆ ಕಡಿಮೆ ಮಾಡಿ, ನಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಿ ಎಂದು ಕೇಳುತ್ತಿದ್ದಾರೆ.

ನರೇಂದ್ರ ಮೋದಿ ಅವರು 2016ರಲ್ಲಿ ಮುಂದಿನ 6 ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. 2022ನೇ ವರ್ಷಕ್ಕೆ ಇದು ಆಗಬೇಕಿತ್ತಲ್ವಾ? ರೈತರ ಸಾಲ ದುಪ್ಪಟ್ಟಾಗಿದ್ದು, ಆದಾಯವಲ್ಲ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯನ್ನು ಸುಮಾರು 50,000 ಕೋಟಿ ರೂ. ಕಡಿಮೆ ಮಾಡಿದ್ದಾರೆ. ನರೇಗಾದಲ್ಲಿ ಕಳೆದ ಬಾರಿಗೂ ಈ ಬಾರಿಗೂ ನೀಡಿರುವ ಅನುದಾನದಲ್ಲಿ 29,000 ಕೋಟಿ ರೂ. ಕಡಿತ ಮಾಡಿದ್ದಾರೆ'' ಎಂದರು.

ಸರ್ಕಾರದಿಂದ ರೈತ ವಿರೋಧಿ ಧೋರಣೆ: ''ಈ ಸರ್ಕಾರ ಶೋಷಿತ ವರ್ಗ, ರೈತರು, ಬಡವರು, ಅವಕಾಶ ವಂಚಿತ ಜನರ ವಿರೋಧಿಯಾಗಿದೆ. ಈ ಹಿಂದೆ ಉಗ್ರಪ್ಪನವರು ಯಡಿಯೂರಪ್ಪನವರನ್ನು “ಬರಗಾಲ ಇದೆ, ರೈತರ ಸಾಲ ಮನ್ನಾ ಮಾಡಿ” ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ನಮ್ಮ ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದಿದ್ದರು.

ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗ ಇಲ್ಲ ಎಂದಿದ್ದಾರೆ. ಹಾಗಾದರೆ ಉದ್ಯಮಿಗಳು, ಬಂಡವಾಳಶಾಹಿಗಳ 12 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಮನ್ನಾ ಮಾಡಿದ್ದಾರಲ್ಲ ಇದರಿಂದ ದೇಶಕ್ಕೆ ಒಳ್ಳೆಯದಾಗಿದೆಯಾ? ಬಿಜೆಪಿಯವರಿಗೆ ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲ. ರೈತರ ಬಗ್ಗೆ ಸರ್ಕಾರದ ಧೋರಣೆ ಕುರಿತು ರಾಜ್ಯಪಾಲರು ಸುಳ್ಳು ಭಾಷಣ ನೀಡಿದ್ದಾರೆ ಎಂದು ಆರೋಪಿಸಿದರು.

ಅಮಿತ್ ಶಾ ವಿರುದ್ಧ ಕಿಡಿ:''ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪ್ರಣಾಳಿಕೆಯಲ್ಲಿನ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೆ. ಇದರ ಜೊತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಅವರು, ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಲವ್ ಜಿಹಾದ್, ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ.

ಮೊನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೇ, ಅಬ್ಬಕ್ಕ ವರ್ಸಸ್ ಟಿಪ್ಪು ನಡುವಿನ ಚುನಾವಣೆ ಎಂದಿದ್ದಾರೆ. ಇದು ಈ ದೇಶದ ಗೃಹ ಮಂತ್ರಿ ಆಡುವ ಮಾತಾ? ಮಹಾತ್ಮ ಗಾಂಧಿ ವರ್ಸಸ್ ಸಾವರ್ಕರ್ ನಡುವಿನ ಚುನಾವಣೆ ಎನ್ನುತ್ತಾರೆ. ಇವೆಲ್ಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದೆಯಾ?'' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ:ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಮುಂದುವರಿಸಲು ಕೇಂದ್ರದ ಜೊತೆ ಮಾತುಕತೆ: ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details