ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ ಸವಾಲು - Opposition leader Siddaramaiah

ಸಿದ್ದು ನಿಜ ಕನಸುಗಳು ಎಂಬ ಕೃತಿ ಬಿಡುಗಡೆ ಮಾಡಲು ಹೊರಟಿದ್ದವರ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ - ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧ - ಸ್ಥಳ ಮತ್ತು ಸಮಯವನ್ನು ಬಿಜೆಪಿ ನಾಯಕರೇ ನಿಗದಿಗೊಳಿಸಿ ನನ್ನನ್ನು ಕರೆಯಲಿ ಎಂದು ಸಿದ್ದು ಸವಾಲು

Siddaramaiah asked   BJP for a public debate
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Jan 10, 2023, 10:56 PM IST

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸದಾ ಸಿದ್ಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ನನಸಾದ ಸಿದ್ದು ನಿಜ ಕನಸುಗಳು ಎಂಬ ಟ್ಯಾಗ್ಲೈನ್ ಅಡಿ ಸರಣಿ ಟ್ವೀಟ್ ಮಾಡಿರುವ ಅವರು, ಸಿದ್ದು ನಿಜ ಕನಸುಗಳು ಎಂಬ ಕೃತಿ ಬಿಡುಗಡೆ ಮಾಡಲು ಹೊರಟಿದ್ದವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ರಾಜ್ಯ ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸದಾ ಸಿದ್ಧ. ಸ್ಥಳ ಮತ್ತು ಸಮಯವನ್ನು ಬಿಜೆಪಿ ನಾಯಕರೇ ನಿಗದಿಗೊಳಿಸಿ ನನ್ನನ್ನು ಕರೆಯಲಿ. ಸುಖಾ ಸುಮ್ಮನೆ ಸುಳ್ಳು - ಪೊಳ್ಳು ಬರ್ಕೊಂಡು, ಪೋಟೋಶಾಪ್ ಮಾಡಿಕೊಂಡು ನಿಮ್ಮ ಮಾನ ನೀವೇ ಮಾರಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ರಾಜಕೀಯವಾಗಿ ನನ್ನನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಎದುರಿಸುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಿಗಿಲ್ಲ. ಇದಕ್ಕಾಗಿ ನನ್ನ ವಿರುದ್ಧದ ಹೋರಾಟವನ್ನೂ ದುಡ್ಡಿಗಾಗಿ ಮಾರಿಕೊಂಡ ಬಾಡಿಗೆ ಬರಹಗಾರರಿಗೆ ಔಟ್ ಸೋರ್ಸ್ ಮಾಡಿದ್ದಾರೆ. ಶೇಮ್ ಆನ್ ಯು. ಚರ್ಚೆ ಸಂವಾದಗಳ ರಾಜಕೀಯದಲ್ಲಿ ನನಗೆ ನಂಬಿಕೆ ಇದೆ. ಇದಕ್ಕಾಗಿಯೇ ಇರುವುದು ವಿಧಾನಮಂಡಲ. ಅಲ್ಲಿ ಚರ್ಚೆ ನಡೆಸುವ ಧೈರ್ಯ ಇಲ್ಲದೇ ಅಧಿವೇಶನವನ್ನೇ ಮೊಟಕುಗೊಳಿಸುತ್ತೀರಿ. ಹೊರಗೆ ಬೀದಿಯಲ್ಲಿ ಬಾಡಿಗೆ ಬರಹಗಾರರನ್ನು ಕಟ್ಟಿಕೊಂಡು ನನ್ನ ಬಗ್ಗೆ ಕಟ್ಟು ಕತೆ ಹೆಣೆಯುತ್ತೀರಿ. ಇದೇನಾ ನಿಮ್ಮ ಸಂಸ್ಕೃತಿ ರಾಜ್ಯ ಬಿಜೆಪಿ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ನೂರು ಪುಸ್ತಕಗಳನ್ನು ಪ್ರಕಟಿಸಿ, ಐ ಡೋಂಟ್ ಕೇರ್. ಅದನ್ನು ತಡೆಯಲೂ ಹೋಗುವುದಿಲ್ಲ. ಆದರೆ, ನನ್ನ ಪೋಟೊವನ್ನು ವಿರೂಪಗೊಳಿಸಿ, ನಿಮ್ಮ ವಿಕೃತ ಕನಸುಗಳಿಗಾಗಿ ನನ್ನ ಸುಂದರ ಕನಸುಗಳನ್ನು ತಿರುಚಿ ಮಾರಾಟ ಮಾಡಲು ಬಿಡುವುದಿಲ್ಲ ಬಿಜೆಪಿ. ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ, ಹಸಿವು, ಅನಕ್ಷರತೆ, ಅನಾರೋಗ್ಯ, ನಿರುದ್ಯೋಗ ಮುಕ್ತ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದೆ. ಪಕ್ಷದ ಪ್ರಣಾಳಿಕೆಯಲ್ಲಿನ 158 ಭರವಸೆಗಳನ್ನು ಈಡೇರಿಸಿ ಆ ಕನಸುಗಳನ್ನು ನನಸಾಗಿಸಿದ್ದೆ ಎಂದು ಹೇಳಿದ್ದು, ಅನುಮಾನ ಇದ್ದವರು ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಸುಳ್ಳು, ಅನ್ಯಾಯ ಮತ್ತು ಅಧರ್ಮದ ನೆಲೆಗಟ್ಟಿನ ಮೇಲೆ ನಿಂತಿರುವ ರಾಜ್ಯ ಬಿಜೆಪಿ ನಾಯಕರಿಗೆ ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಹಾದಿಯಲ್ಲಿ ನಡೆಯುವವರನ್ನು ಕಂಡರೆ ಭಯ. ಈ ಭಯದಿಂದಲೇ ರಾತ್ರಿ - ಹಗಲು ನನ್ನ ವಿರುದ್ಧ ಸುಳ್ಳು ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್​​ ತಡೆಯಾಜ್ಞೆ:ಬೆಂಗಳೂರಿನ ಪುರಭವನದಲ್ಲಿ ನಡೆಯಬೇಕಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತಾದ ಕೃತಿ ಬಿಡುಗಡೆಗೆ ತಡೆ ನೀಡುವಂತೆ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಪುಸ್ತಕ ಬಿಡುಗಡೆ ವಿರೋಧಿಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಕುರುಬ ಸಮುದಾಯದ ನಾಯಕರು ನಗರದ ಪುರಭವನ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು, ಪುಸ್ತಕ ಬಿಡುಗಡೆಗೆ ತಾತ್ಕಾಲಿಕ ತೆರೆ ಬಿದ್ದಿದೆ. ಟಿಪ್ಪು ಮಾದರಿಯಲ್ಲಿ ಸಿದ್ದರಾಮಯ್ಯರನ್ನು ಬಿಂಬಿಸಿ ಪುಸ್ತಕ ಬಿಡುಗಡೆಗೆ ಮುಂದಾಗಿದ್ದ ಆಯೋಜಕರಿಗೆ ಕೋರ್ಟ್ ತಡೆಯಾಜ್ಞೆಯಿಂದ ಹಿನ್ನಡೆ ಉಂಟಾಗಿತ್ತು.

ಇದನ್ನೂ ಓದಿ:ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ಆಡಳಿತ ವಿರುದ್ಧ ದನಿ ಎತ್ತಲು ನಾಳೆಯಿಂದ ಪ್ರಜಾಧ್ವನಿ ಬಸ್ ಯಾತ್ರೆ: ಡಿಕೆ ಶಿವಕುಮಾರ್

ABOUT THE AUTHOR

...view details