ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿದೆ. ಹೈಕಮಾಂಡ್ ನಾಯಕರು ಕಟ್ಟಾ ಸಂಘಟನಾತ್ಮಕ ವರ್ಚಸ್ವಿ ನಾಯಕನ ಹುಡುಕಾಟದಲ್ಲಿದ್ದು ರಾಜ್ಯದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಬ್ಬರಿಗೂ ಒಪ್ಪಿತ ವ್ಯಕ್ತಿಯ ಆಯ್ಕೆ ಮಾಡಬೇಕಾಗಿದೆ.
ಹಾಗಾಗಿ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿದ್ದು ಶೋಭಾ ಕರಂದ್ಲಾಜೆ ಸೂಕ್ತ ವ್ಯಕ್ತಿ ಎನ್ನುವ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ. ಹಾಗಾಗಿಯೇ ಕರಂದ್ಲಾಜೆ ಹೆಸರು ಮತ್ತೆ ಚಾಲ್ತಿಗೆ ಬಂದಿದೆ. ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಹುಡುಕಾಟ ನಡೆಯುತ್ತಿದೆ. ಸಾಕಷ್ಟು ನಾಯಕರು ರಾಷ್ಟ್ರ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿ ರಾಜ್ಯಕ್ಕೆ ವಾಪಸಾಗಿರುವ ಸಿ.ಟಿ.ರವಿ ಪ್ರಬಲ ಆಕಾಂಕ್ಷಿಯಾಗಿದ್ದು, ಹಿರಿಯ ನಾಯಕ ವಿ.ಸೋಮಣ್ಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಾಜಿ ಡಿಸಿಎಂ ಅಶ್ವತ್ಥನಾರಾಯಣ್, ಯುವಕರಿಗೆ ಆದ್ಯತೆ ನೀಡಬೇಕು ಎನ್ನುವ ದನಿ ಎಬ್ಬಿಸಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಆದರೆ ಈ ಯಾವ ಹೆಸರನ್ನು ಹೈಕಮಾಂಡ್ ಪರಿಗಣಿಸಲು ಉತ್ಸುಕವಾಗಿಲ್ಲ ಎನ್ನಲಾಗಿದೆ.
ವಿಧಾನಸಭಾ ಚುನಾವಣೆ ಸಮಯದಲ್ಲೇ ಶೋಭಾ ಕರಂದ್ಲಾಜೆ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ಚುನಾವಣೆಯಲ್ಲಿ ಪಕ್ಷ ದಯನೀಯವಾಗಿ ಸೋತ ನಂತರ ರಾಜ್ಯ ಘಟಕದ ಕಡೆ ಗಮನ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಹೆಸರನ್ನು ಅಂತಿಮಗೊಳಿಸದೆ ಮತ್ತಷ್ಟು ಸಮಯ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಈಗ ಮತ್ತೆ ಶೋಭಾ ಕರಂದ್ಲಾಜೆ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಹೈಕಮಾಂಡ್ ನಿರೀಕ್ಷೆ ಮಾಡುತ್ತಿರುವ ಗುಣಗಳನ್ನು ಹೊಂದಿರುವುದು. ಉತ್ತರ ಪ್ರದೇಶ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಕ್ರಿಯಾಶೀಲತೆಯಿಂದ ಕೆಲಸ ಮಾಡಿ ವರಿಷ್ಠರ ಮೆಚ್ಚುಗೆ ಗಳಿಸಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಇದು ಕೂಡ ಹೈಕಮಾಂಡ್ ನಾಯಕರ ಗಮನ ಸೆಳೆದಿದೆ.