ಬೆಂಗಳೂರು : ನಗರದ ಬೃಹತ್ ಸಮಸ್ಯೆಯಾಗಿ, ಮಾಫಿಯಾವಾಗಿ ಬದಲಾಗಿರುವ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಸ್ವಾಯತ್ತ ಮಂಡಳಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಆದರೆ, ಈ ನಡೆಯನ್ನು ಆಮ್ ಆದ್ಮಿ ಪಕ್ಷ ವಿರೋಧಿಸುತ್ತದೆ ಎಂದು ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ, ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಹೇಳಿದರು.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗುವುದಕ್ಕಿಂತ ಮೊದಲು, ಬೆಂಗಳೂರಿನ ಕಸ ನಿರ್ವಹಣೆ ಆರೋಗ್ಯ ಅಧಿಕಾರಿಗಳ ಅಡಿಯಲ್ಲಿ ಬರುತ್ತಿತ್ತು. ಆನಂತರ ಇದನ್ನು ಎಂಜಿನಿಯರಿಂಗ್ ವಿಭಾಗಕ್ಕೆ ವರ್ಗಾಯಿಸಲಾಯಿತು. ಇದಾದ ನಂತರ ಕಸದ ಮಾಫಿಯಾ ಕೈಗೆ ಸಿಲುಕಿದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಇಡೀ ಬೆಂಗಳೂರು ಕಸದ ಕೊಂಪೆಯಾಗಿ ಮಾರ್ಪಟ್ಟಿದೆ ಎಂದರು.
ಇಡೀ ಸರ್ಕಾರವನ್ನೇ ನಿಯಂತ್ರಣ ಮಾಡುವಷ್ಟು ಬೆಳೆದಿರುವ ಕಸದ ಮಾಫಿಯಾಗಳ ಚಿತಾವಣೆಯಿಂದ, ಈ ಕೆಲಸಕ್ಕೆ ಬಿಬಿಎಂಪಿ ಕೈ ಹಾಕಿದೆ. 150 ಕೋಟಿ ವೆಚ್ಚದ ಕಸ ನಿರ್ವಹಣೆ ಬಜೆಟ್ ಈಗಾಗಲೇ ₹1200 ಕೋಟಿಗೆ ಮುಟ್ಟಿದೆ. ಪ್ರತ್ಯೇಕ ಮಂಡಳಿ ರಚಿಸಿ ಮತ್ತಷ್ಟು ಜನರ ಹಣವನ್ನು ತಿನ್ನುವ ಹುನ್ನಾರ ಎಂದು ಹೇಳಿದರು. ಪ್ರಸ್ತುತ ಹಲ್ಲು ಕಿತ್ತ ಹಾವಿನಂತಾಗಿರುವ ಬಿಬಿಎಂಪಿಯನ್ನು, ಮತ್ತಷ್ಟು ದುರ್ಬಲಗೊಳಿಸುವ ಹುನ್ನಾರ ಇದಾಗಿದೆ.