ಬೆಂಗಳೂರು: ವಿಧಾನಪರಿಷತ್‍ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಜೆಡಿಎಸ್ ಆಯ್ಕೆ ಮಾಡಿದೆ. ವಿಧಾನಪರಿಷತ್‍ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎ.ಪಿ. ರಂಗನಾಥ್, ಆಗ್ನೇಯ ಪದವೀಧರ ಕ್ಷೇತ್ರ ಆರ್. ಚೌಡರೆಡ್ಡಿ ತೂಪಲ್ಲಿ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶಿವಶಂಕರ ಕಲ್ಲೂರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ತಿಮ್ಮಯ್ಯ ಎಸ್. ಪುರ್ಲೆ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಜೆಡಿಎಸ್ ಆಯ್ಕೆ ಮಾಡಿದೆ.
ವಿಧಾನಪರಿಷತ್‍ನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇಂದು ಅಧಿಸೂಚನೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಪರಿಷತ್‍ನ ಆಗ್ನೇಯ ಪದವೀಧರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ.
ಅಕ್ಟೋಬರ್ 8 ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಅಕ್ಟೋಬರ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 12 ರವರೆಗೂ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದೆ. ಅಕ್ಟೋಬರ್ 28ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದು, ನವೆಂಬರ್ 2ರಂದು ಮತ ಎಣಿಕೆಯಾಗಲಿದೆ. ನ.5ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಕೊರೊನಾ ಸಂಕಷ್ಟದ ನಡುವೆಯೂ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಅ.6 ರಂದು ಜೆಡಿಎಸ್ ಸಭೆ : ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಬರುವ ಅ.6 ರಂದು ಸಂಬಂಧಪಟ್ಟ ಶಾಸಕರ, ಅಭ್ಯರ್ಥಿಗಳ, ಜಿಲ್ಲಾಧ್ಯಕ್ಷರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಕರೆದಿದ್ದಾರೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಅಂದು ಮಧ್ಯಾಹ್ನ 2.30 ಕ್ಕೆ ಸಭೆ ಕರೆಯಲಾಗಿದೆ. ಸಭೆಯಲ್ಲಿ ಆಹ್ವಾನಿಸಿರುವವರು ಭಾಗವಹಿಸಿ ಸಲಹೆ, ಅಭಿಪ್ರಾಯಗಳನ್ನು ನೀಡಬೇಕು ಎಂದು ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಿಂದ ಆರ್.ಚೌಡರೆಡ್ಡಿ ತೂಪಲ್ಲಿ, ಪಶ್ಚಿಮ ಪದವೀಧರ ಕ್ಷೇತ್ರದಿಂದ ಶಿವಶಂಕರ ಕಲ್ಲೂರ, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ತಿಮ್ಮಯ್ಯ ಎಸ್.ಪುರ್ಲೆ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ.ರಂಗನಾಥ್ ಕಣಕ್ಕಿಳಿಯಲಿದ್ದಾರೆ. ಚುನಾವಣೆಯು ನಿರ್ಣಾಯಕವಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿಗಳು ಜಯಶೀಲರನ್ನಾಗಿ ಮಾಡಲು ತಮ್ಮ ಸಲಹೆ ಮತ್ತು ಸಹಕಾರ ಅತ್ಯವಶ್ಯಕವಾಗಿದೆ.
ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಯಶಸ್ಸಿನ ಬಗ್ಗೆ ಚರ್ಚಿಸಿ ತಮ್ಮ ಸಲಹೆ, ಅಭಿಪ್ರಾಯ ಮತ್ತು ಸಹಕಾರ ಬೇಕಾಗಿದೆ. ಹೀಗಾಗಿ ಅ.6 ರಂದು ಕರೆದಿರುವ ಆಯಾ ಜಿಲ್ಲೆಗಳ ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ಅಭ್ಯರ್ಥಿಗಳು ಮತ್ತು ಜಿಲ್ಲಾಧ್ಯಕ್ಷರ ಸಭೆಯಲ್ಲಿ ಭಾಗವಹಿಸಬೇಕು. ಸಭೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.