ಬೆಂಗಳೂರು: ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಅನಾಮದೇಯರೊಬ್ಬರು ಸೌದಿ ಅರೇಬಿಯಾ ರಾಜ ಮತ್ತು ಇಸ್ಲಾಂನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದ ಆರೋಪದಲ್ಲಿ ಸಿಲುಕಿ ದೇಶದ್ರೋಹ ಕಾಯ್ದೆಯಡಿ ಸೌದಿ ಅರೇಬಿಯಾದ ಜೈಲಿನಲ್ಲಿರುವ ಮಂಗಳೂರು ಮೂಲದ ಶೈಲೇಶ್ ಕುಮಾರ್ ಅವರಿಗೆ ಪೂರ್ವಗ್ರಹವಾಗಿ ತೊಂದರೆಯುಂಟಾಗದಂತೆ ರಾಜ ತಾಂತ್ರಿಕ ಮಟ್ಟದ ಚರ್ಚೆ ನಡೆಸುವಂತೆ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿರುವ ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ, ಸರ್ಕಾರಗಳು ಕೇವಲ ಪತ್ರ ವ್ಯವಹಾರ ನಡೆಸಿದರೆ ಸಾಲದು. ನಮ್ಮ ಪೊಲೀಸರು ಸ್ಕಾಟ್ಲೆಂಡ್ ಮತ್ತು ಮೊಸಾದ್ ಪೊಲೀಸರ ಚಾಣಾಕ್ಷಣತೆ ಹಾಗೂ ಕೌಶಲವನ್ನು ಪ್ರದರ್ಶಿಸಬೇಕು. ಇದು ವಿದೇಶಿ ನೆಲದಲ್ಲಿ ಭಾರತೀಯ ಪ್ರಜೆಯೊಬ್ಬರ ಜೀವ ಅಪಾಯದಲ್ಲಿದೆ ಎಂಬುದಕ್ಕೆ ಉದಾಹರಣೆ. ಹೀಗಾದರೆ ನಾಳೆ ವಿದೇಶಗಳಲ್ಲಿ ಇರುವ ಭಾರತೀಯರ ಪರಿಸ್ಥಿತಿ ಏನಾಗಲಿದೆ ಎಂದು ಆತಂಕ ವ್ಯಕ್ತಪಡಿಸಿತು.
ಅಷ್ಟೇ ಅಲ್ಲದೆ, ಪಾಕಿಸ್ತಾನದ ಜೈಲಿನಲ್ಲಿರುವ ಭಾರತದ ಕುಲಭೂಷಣ್ ಜಾದವ್ ಅವರ ಪ್ರಕರಣದಲ್ಲಿ ತೆಗೆದುಕೊಂಡಿರುವ ನಿಲುವನ್ನು ಈಗ ಏಕೆ ಕೈಗೊಳ್ಳುತ್ತಿಲ್ಲ. ಎಲ್ಲ ಪ್ರಯತ್ನ ನಡೆಯುತ್ತಿದೆ ಎಂದು ಹೇಳುತ್ತೀರಿ. ಆದರೆ, ಈ ಕಾರ್ಯ ಸಾಲದಾಗಿದೆ. ಸಂತ್ರಸ್ತರಿಗೆ ಶಿಕ್ಷೆಯಾಗಬಾರದಾಗಿತ್ತು. ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪೀಠ ಕೇಂದ್ರವನ್ನು ಪ್ರಶ್ನಿಸಿತು. ಅಲ್ಲದೆ, ಈ ನಡೆ ಸರ್ಕಾರದ ಮೇಲೆ ಹೇಗೆ ವಿಶ್ವಾಸವನ್ನು ನಿರ್ಮಿಸಲಿದೆ ಎಂದು ಪ್ರಶ್ನಿಸಿತು.
ಸೌದಿ ಅರೇಬಿಯಾ ಭಾರತದ ನೆಚ್ಚಿನ ವಿದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಂತಹ ಪ್ರಕರಣಗಳಲ್ಲಿ ವಿಯೆನ್ನಾ ಒಪ್ಪಂದದ ಅನುಸಾರ ನಮ್ಮ ವ್ಯವಹಾರಗಳು ಜರುಗಬೇಕು. ನಮ್ಮ ದೇಶದ ಪ್ರಜೆಯೊಬ್ಬ ವಿದೇಶದಲ್ಲಿ ಅಪಾಯದಲ್ಲಿ ಸಿಲುಕಿದ್ದಾನೆ ಎಂದಾಗ ರಾಜ್ಯದ ಅತ್ಯುನ್ನತ ಕೋರ್ಟ್ ಎನಿಸಿದ ಹೈಕೋರ್ಟ್ ಆ ಕುರಿತು ಕಾಳಜಿ ವಹಿಸಿದೆ ಎಂಬುದು ಅವರ ಗಮನಕ್ಕೂ ಬರಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.