ಬೆಂಗಳೂರು:ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಎಸ್ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್ಪಿ) ಅಡಿಯಲ್ಲಿ ಪ್ರಸಕ್ತ ವರ್ಷ ಈವರೆಗಿನ ಪ್ರಗತಿ ನಿರಾಶಾದಾಯಕವಾಗಿದೆ. ಅರ್ಧ ವರ್ಷ ಕಳೆದರೂ ಅನೇಕ ಇಲಾಖೆಗಳು ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿವೆ.
ಪ್ರಸಕ್ತ ವರ್ಷ 23,023.37 ಕೋಟಿ ರೂ. ಮೊತ್ತವನ್ನು ಎಸ್ಸಿಎಸ್ಪಿಯಡಿ ಹಂಚಿಕೆ ಮಾಡಲಾಗಿದೆ. ಇತ್ತ ಟಿಎಸ್ಪಿಯಡಿ 9,361 ಕೋಟಿ ರೂ. ಅನುದಾನ ಹಂಚಲಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅಡಿ ಹಂಚಿಕೆಯಾದ ಅನುದಾನ ಇಲಾಖೆಗಳು ಸಮರ್ಪಕವಾಗಿ ಸದ್ಬಳಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿದ್ದರೂ, ಅನೇಕ ಇಲಾಖೆಗಳು ಬಳಸಲು ಮೀನಮೇಷ ಎಣಿಸುತ್ತಿವೆ.
ಶೇ.32.70ರಷ್ಟು ಎಸ್ಸಿಎಸ್ಪಿ ಅನುದಾನ ಬಳಕೆ:ಎಸ್ಸಿಎಸ್ಪಿಯಡಿ 2022-23ನೇ ಸಾಲಿನಲ್ಲಿ ಸರ್ಕಾರ 23,023.37 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಈ ಪೈಕಿ 8,496.30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಕ್ಟೋಬರ್ವರೆಗೆ 7,529.57 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಅಂದರೆ ಈವರೆಗೆ ಒಟ್ಟು ಅನುದಾನ ಹಂಚಿಕೆ ಮುಂದೆ ಕೇವಲ ಶೇ.32.70 ಮಾತ್ರ ಪ್ರಗತಿ ಸಾಧಿಸಲಾಗಿದೆ.
ಕಳಪೆ ಪ್ರಗತಿ ಕಂಡ ಇಲಾಖೆ ಯಾವುದು?:ಕೃಷಿ ಇಲಾಖೆಯು ಏಳು ತಿಂಗಳಲ್ಲಿ ಎಸ್ಸಿಎಸ್ಪಿಯಡಿ ಅನುದಾನ ಬಳಕೆಯಲ್ಲಿ ಕೇವಲ ಶೇ. 14.74ರಷ್ಟು ಪ್ರಗತಿ ಕಂಡಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೇ. 19.29 ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ಕೇವಲ ಶೇ.13.70 ಮಾತ್ರ ಪ್ರಗತಿ ಸಾಧಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನುದಾನ ಬಳಕೆಯಲ್ಲಿ ಕೇವಲ ಶೇ. 17.43ರಷ್ಟು ಪ್ರಗತಿ ಕಂಡಿದೆ. ಉನ್ನತ ಶಿಕ್ಷಣ ಇಲಾಖೆ ಕೇವಲ ಶೇ.2.02, ವಸತಿ ಇಲಾಖೆಯಲ್ಲಿ ಶೇ. 15.62, ಐಟಿ-ಬಿಟಿ ಶೇ.6.25 ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಶೇ.24.29ರಷ್ಟು ಪ್ರಗತಿ ಸಾಧಿಸಿದೆ.