ಬೆಂಗಳೂರು: ಹೆಚ್ಚುವರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಸೃಷ್ಟಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಯಾವಾಗ ಮಾಡ್ತಾರೋ ನೋಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಡಿಸಿಎಂ ಹುದ್ದೆಗಳ ಬಗ್ಗೆ ಸಚಿವ ರಾಜಣ್ಣ ಸಾಕಷ್ಟು ಬಾರಿ ಹೇಳಿದ್ದಾರೆ. ನಾವೂ ಕೂಡ ಹಿಂದೆ ಪದೇ ಪದೇ ಹೇಳಿದ್ದೇವೆ. ಸಮುದಾಯವಾರು ಡಿಸಿಎಂ ಆಗಬೇಕು ಅಂತ ಇದೆ. ವರಿಷ್ಠರು ತೀರ್ಮಾನ ಮಾಡಬೇಕು. ಯಾವಾಗ ಮಾಡುತ್ತಾರೋ ನೋಡಬೇಕು. ಅಲ್ಲಿವರೆಗೆ ನಾವು ಕಾಯಬೇಕು ಅಷ್ಟೇ. ನಾವೇನೂ ದೆಹಲಿಗೆ ಹೋಗಲ್ಲ. ಹೋದರೆ ಹೇಳುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಜೊತೆ ಏನಾದರೂ ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ, ಸಿಎಂ ಕೂಡ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕು ಅಂತ ಹೇಳುತ್ತಾರೆ. ಅವರು ಕೂಡ ಮೊದಲಿಗೆ 4 ಡಿಸಿಎಂ ಮಾಡಬೇಕು ಅಂತ ಹೇಳಿದ್ದರಂತೆ ಎಂದರು.
ಪಕ್ಷ ಸಂಘಟನೆ ಬಗ್ಗೆ ಚರ್ಚೆ:ರಾತ್ರಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದು ಪಕ್ಷದ ಮಂತ್ರಿಗಳು ಊಟಕ್ಕೆ ಸೇರಿದ್ದೀವಿ. ಅಂತಹ ವಿಶೇಷತೆ ಏನೂ ಇಲ್ಲ. ಊಟಕ್ಕೆ ಸೇರಿದಾಗ ಕೆಲವು ವಿಚಾರಗಳ ಜೊತೆಗೆ ಲೋಕಸಭಾ ಚುನಾವಣೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ದಲಿತ ಸಿಎಂ ಮತ್ತು ಡಿಸಿಎಂ ವಿಚಾರವಾಗಿ ಚರ್ಚೆ ಮಾಡಿಲ್ಲ. ಎಸ್ಸಿ, ಎಸ್ಟಿ ಸಮಾವೇಶ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.