ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಸಿಲುಕಿರುವ ನಟಿಮಣಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿಗೀಗ ಇಡಿ(ಜಾರಿ ನಿರ್ದೇಶನಾಲಯ) ಸಂಕಷ್ಟ ಎದುರಾಗಿದೆ.
ಸಂಜನಾ ಗಲ್ರಾನಿ ಹಾಗೂ ರಾಗಿಣಿ ಸೇರಿದಂತೆ ಉಳಿದ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದು, ಯಾವಾಗ ಹೊರಗೆ ಬರುತ್ತೇವೋ ಎಂಬ ಚಿಂತೆಯಲ್ಲಿದ್ದವರಿಗೆ ನಿನ್ನೆಯಿಂದ ಇಡಿ(ಜಾರಿ ನಿರ್ದೇಶನಾಲಯ) ವಿಚಾರಣೆ ನಡೆಸಲು ಮುಂದಾಗಿದೆ. ಐದು ದಿವಸಗಳ ಕಾಲ ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ, ಹವಾಲಾ ದಂಧೆ ವಿಚಾರವಾಗಿ ಪಿಎಂಎಲ್ಎ ( ಮನಿ ಲ್ಯಾಂಡರಿಂಗ್ ತಡೆ ಕ್ರಿಮಿನಲ್ ಮೊಕದ್ದಮೆ ) ಅಡಿ ಇಡಿ ತನಿಖೆ ನಡೆಸಲಿದೆ.
ಸಿಸಿಬಿ ತನಿಕಾಧಿಕಾರಿಗಳು ತನಿಖೆಗೆ ಇಳಿದಾಗ, ಆರೋಪಿಗಳು ವಾಟ್ಸಪ್ನಲ್ಲಿ ಕೋಡ್ ವರ್ಡ್ ಮುಖಾಂತರ ವ್ಯವಹಾರ ನಡೆಸಿದ್ದರು. ಡ್ರಗ್ಸ್ಗಳನ್ನು ಡಾರ್ಕ್ ವೆಬ್ ಮೂಲಕ ತರಿಸಿ ನಗದು, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸದೆ ಬಿಟ್ ಕಾಯಿನ್ ಮೂಲಕ ಅನೇಕ ರೀತಿಯಾಗಿ ಅಕ್ರಮ ವಹಿವಾಟು ನಡೆಸಿರುವ ವಿಚಾರ ಬಯಲಾಗಿತ್ತು. ಹೀಗಾಗಿ ಆರೋಪಿಗಳು ಸಿಸಿಬಿ ವಶದಲ್ಲಿರುವಾಗ ಇಡಿ ಅಧಿಕಾರಿಗಳು ಚಾಮಾರಾಜಪೇಟೆ ಸಿಸಿಬಿ ಕಚೇರಿಗೆ ಆಗಮಿಸಿ ಕೆಲ ಮಹತ್ವದ ದಾಖಲೆಗಳನ್ನು ಪಡೆದಿದ್ದರು.