ಬೆಂಗಳೂರು:ಈ ಬಾರಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆಯ ಚಿಂತನೆಯಲ್ಲಿರುವ ಬಿಜೆಪಿ ಬಾಗಿಲನ್ನು ಮಾಜಿ ಶಾಸಕ ರೋಷನ್ ಬೇಗ್ ತಟ್ಟುತ್ತಿದ್ದಾರೆ. ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ಬಿಜೆಪಿ ಕಡೆ ಮುಖ ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲಕ ಪಕ್ಷ ಸೇರ್ಪಡೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಬೇಗ್ ಅವರ ಸೇರ್ಪಡೆಗೆ ಅಷ್ಟಾಗಿ ಆಸಕ್ತಿ ತೋರದಿದ್ದರೂ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯೇ ಸತತವಾಗಿ ಆಯ್ಕೆಯಾಗುತ್ತಿರುವ ಕ್ಷೇತ್ರದಲ್ಲಿ ಕಮಲ ಅರಳಿಸಲು ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದಲ್ಲಿ ಬೇಗ್ ಸೇರ್ಪಡೆಗೆ ಹಾದಿ ಸುಗಮವಾಗಲಿದೆ ಎನ್ನಲಾಗುತ್ತಿದೆ ಹಾಗಾಗಿ ರೋಷನ್ ಬೇಗ್ ಸಿಎಂ ಅವರ ಬೆನ್ನು ಬಿದ್ದಿದ್ದಾರೆ.
ಶಿವಾಜಿನಗರ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಈ ಸಂಬಂಧ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಯತ್ನಿಸುತ್ತಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸಕ್ಕೆ ರೋಷನ್ ಬೇಗ್ ಆಗಮಿಸಿದರು. ಆದರೆ ಆ ವೇಳೆಗೆ ಮುಖ್ಯಮಂತ್ರಿಗಳು ಆರ್.ಟಿ ನಗರದಲ್ಲಿರುವ ತಮ್ಮ ಖಾಸಗಿ ನಿವಾಸಕ್ಕೆ ತೆರಳಿದ್ದರು ಹಾಗಾಗಿ ಸಿಎಂ ಭೇಟಿಗೆ ಬಂದಿದ್ದ ರೋಷನ್ ಬೇಗ್ ಬರಿಗೈಲಿ ವಾಪಸ್ ಆದರು. ಖಾಸಗಿ ನಿವಾಸಕ್ಕೆ ಭೇಟಿ ನೀಡುವುದು ಅಷ್ಟು ಸರಿಯಿಲ್ಲ ಎನ್ನುವ ಕಾರಣಕ್ಕೆ ಬೇಗ್ ಆರ್.ಟಿ ನಗರ ನಿವಾಸಕ್ಕೆ ತೆರಳಿಲ್ಲ ಎನ್ನಲಾಗ್ತಿದೆ.
ತಮ್ಮ ಪುತ್ರ ರುಮನ್ ಬೇಗ್ ಗೆ ಶಿವಾಜಿನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತಿರುವ ರೋಷನ್ ಬೇಗ್ ಬಿಜೆಪಿ ಸೇರಲು ಮಾತುಕತೆಯ ಪ್ರಸ್ತಾಪ ಕಳುಹಿಸಿದ್ದಾರೆ.ಅದರ ಭಾಗವಾಗಿಯೇ ಸಿಎಂ ಭೇಟಿಗೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಕೂಡ ಈವರೆಗೂ ಕೇವಲ ಎರಡು ಬಾರಿ ಮಾತ್ರ ಗೆದ್ದಿದ್ದು ಸತತವಾಗಿ ಸೋಲುತ್ತಲೇ ಬಂದಿದೆ ಹಾಗಾಗಿ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ಪ್ರಯತ್ನಿಸುತ್ತಿದ್ದಾರೆ.