ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯು ಹಣದ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಬೆನ್ನಲ್ಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವ ದಮನ ಮಾಡುವುದೇ ಬಿಜೆಪಿ ಸಿದ್ಧಾಂತವಾಗಿದೆ. ವಾಮಮಾರ್ಗದ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವುದು ಹೊಸದೇನಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ಆರೋಪ ಕುರಿತು ಮಾತನಾಡಿದ ಸಚಿವರು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಾಸಕರನ್ನು ಖರೀದಿ ಮಾಡುತ್ತಿಲ್ಲ. 2008 ಹಾಗೂ 2019 ರಲ್ಲಿ ಆಪರೇಷನ್ ಕಮಲ ಮೂಲಕ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿತ್ತು. ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಮಹಾರಾಷ್ಟ್ರ ರಾಜಸ್ಥಾನ, ಗೋವಾ ಸೇರಿದಂತೆ ಎಲ್ಲಿಲ್ಲಿ ಬಿಜೆಪಿ ಆಡಳಿತವಿದೆಯೋ ಶೇ.75 ರಷ್ಟು ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ರಚಿಸಿದೆ ಎಂದು ಸಚಿವ ಬೈರೇಗೌಡ ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರಿಂದಲೇ ಕೇಳಿಬರುತ್ತಿರುವ ಪವರ್ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಯ ಬಂದಾಗ ಹೈಕಮಾಂಡ್ ನಿರ್ಧರಿಸುತ್ತದೆ. ಅವರವರ ಅಭಿಪ್ರಾಯಗಳನ್ನು ಶಾಸಕರು ಹೇಳಿಕೆ ನೀಡಿದ್ದಾರೆ. ಅಧಿಕಾರದ ಚರ್ಚೆ ಹೊರತು ಪಡಿಸಿ ಜನಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಒಳಿತು ಎಂದರು.
ನಿನ್ನೆ ಥಣಿ ಸಂದ್ರದಲ್ಲಿರುವ ಹಜ್ ಭವನದಲ್ಲಿ ಕಾಣಿಸಿಕೊಂಡ ಬೆಂಕಿ ಹಿನ್ನೆಲೆ ಸ್ಥಳಕ್ಕೆ ಹೋಗಿ ಸಚಿವರು ಪರಿಶೀಲಿಸಿದರು. ಬಳಿಕ ಮಾತನಾಡಿ ಶಾಕ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಸಭಾಂಗಣದಲ್ಲಿರುವ ಸುಮಾರು 500ಕ್ಕಿಂತ ಹೆಚ್ಚು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಹಬೆ ಹೆಚ್ಚಾಗಿ ಸಭಾಂಗಣ ಮೇಲ್ಚಾವಣಿಗೆ ಬಿಸಿ ತಟ್ಟಿದ್ದು ಪರಿಣಾಮ ಬಿರುಕು ಮೂಡಿವೆ. ಘಟನೆಯಲ್ಲಿ ಆಡಿಟೋರಿಯಂ ವಿನ್ಯಾಸಕ್ಕೆ ಧಕ್ಕೆಯಾಗಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ಸಂಭವಿಸಿದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಭೂ ಡಿಜಿಟಲ್ಗೆ ಒತ್ತು:ಆಡಳಿತದಲ್ಲಿ ಪಾರದರ್ಶಕತೆ ಹಾಗೂ ದುರುಪಯೋಗ ತಡೆಗಟ್ಟಲು ರಾಜ್ಯದಲ್ಲಿ ಜಾರಿಯಾಗಿರುವ ಕಾವೇರಿ ತಂತ್ರಾಂಶ-2 ಹಾಗೂ ಆಸ್ತಿ ಮಾರ್ಗಸೂಚಿ ದರ ಪರಿಷ್ಕೃತಗೊಳಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಾನಾ ಸವಾಲುಗಳು ಎದುರಾಗಿದ್ದು, ಭವಿಷ್ಯದಲ್ಲಿ ಭೂ ದಾಖಲೆಯನ್ನು ಡಿಜಿಟಲೀಕರಣ ಮಾಡಿ ಕಾವೇರಿ-2 ತಂತ್ರಾಂಶದಡಿ ಅಳವಡಿಸುವ ಪಣ ತೊಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.