ಬೆಂಗಳೂರು :ಭ್ರಷ್ಟಾಚಾರ ಆರೋಪ ಸಂಬಂಧ ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿವೃತ್ತ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ 12.15 ಲಕ್ಷ ರೂ .ಗಳನ್ನು ಹಿಂದಿರುಗಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಪ್ರಸ್ತುತ ಸೇವೆಯಿಂದ ನಿವೃತ್ತರಾಗಿರುವ 67ವರ್ಷದ ಶಿವಲಿಂಗ ಮೂರ್ತಿ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಜೊತೆಗೆ ಅರ್ಜಿದಾರರಿಂದ ವಶಪಡಿಸಿಕೊಂಡ ಹಣ ಆದಾಯಕ್ಕೂ ಮೀರಿದ್ದಾಗಿದೆ ಎಂದು ಸಾಬೀತು ಪಡಿಸಲು ಲೋಕಾಯುಕ್ತ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ. ಹೀಗಾಗಿ ಅರ್ಜಿದಾರರಿಗೆ ಸೇರಬೇಕಾದ 12.15 ಲಕ್ಷ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ. ಈ ನಡುವೆ ಅರ್ಜಿದಾರರು ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಅವರ ವಿರುದ್ಧ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರವಾದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಯಾವುದೇ ರೀತಿಯ ಮನವಿಯನ್ನು ಅಂಗೀಕರಿಸಿರಲಿಲ್ಲ.
ಪ್ರಕರಣದ ಹಿನ್ನೆಲೆ ಏನು ?:2003ರಲ್ಲಿ ಐಟಿಐ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸುವುದಕ್ಕಾಗಿ ವಿದ್ಯಾರ್ಥಿಗಳು ಮತ್ತು ಐಟಿಐ ಕಾಲೇಜುಗಳಿಂದ ಲಂಚ ಪಡೆದು, ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅಲ್ಲದೆ, ಆವರಣದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ಅರ್ಜಿದಾರರ ಪರವಾಗಿ ಹಣ ಸ್ವೀಕರಿಸುತ್ತಿರುವುದಾಗಿ ತಿಳಿದು 7 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿದ್ದರು.