ಬೆಂಗಳೂರು: ಚುನಾವಣಾ ರಾಜಕೀಯ ನಿವೃತ್ತಿ ನಿರ್ಧಾರ ನನ್ನ ಸ್ವಂತ ನಿರ್ಧಾರ. ಈ ಬಗ್ಗೆ ಯಾರೂ ನನ್ನ ಜೊತೆ ಚರ್ಚಿಸಿಲ್ಲ, ಒತ್ತಡ ಹಾಕಿಲ್ಲ. ಟಿಕೆಟ್ ಕೈ ತಪ್ಪುವ ಆತಂಕದಿಂದಲೂ ಈ ನಿರ್ಧಾರ ಕೈಗೊಂಡಿಲ್ಲ. ನನ್ನ ಕುಟುಂಬದ ಜೊತೆ ಚರ್ಚಿಸಿ ನಾನೇ ತೆಗೆದುಕೊಂಡ ನಿರ್ಧಾರ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸ್ಪಷ್ಟೀಕರಣ ನೀಡಿದ್ದಾರೆ.
ಸಂಜಯ್ ನಗರದಲ್ಲಿರುವ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಸ್ತವವಾಗಿ ರಾಷ್ಟ್ರೀಯ ನಾಯಕ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ. ಯಾವುದೇ ಒತ್ತಡ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ನಾನು ಆಂಜನೇಯ ರೀತಿ ಎದೆ ಬಗೆದು ತೋರಿಸಲಾಗಲ್ಲ. ಸತ್ಯವನ್ನೇ ಹೇಳಿದ್ದೇನೆ. ಕಠೋರವಾಗಿ ಹೇಳಿಲ್ಲ. ಯಾವುದೇ ಒತ್ತಡ ಇಲ್ಲ. ಯಾರ ಬಳಿಯೂ ಚರ್ಚೆ ಮಾಡಿಲ್ಲ. ನಾನು ನಿವೃತ್ತಿ ಆಗ್ತೇನೆ ಅಂತ 2019ರಲ್ಲೇ ಹೇಳಿದ್ದೆ. ಆಗ ಪಕ್ಷ ಮತ್ತು ಸಂಘ ಈ ಬಾರಿ ಸ್ಪರ್ಧೆ ಮಾಡಿ ಅಂತ ಹೇಳಿದ್ದರು. ಅದಕ್ಕಾಗಿಯೇ ಸ್ಪರ್ಧೆ ಮಾಡಿದ್ದೆ. ರಾಜಕೀಯ ನಿವೃತ್ತಿ ನಿರ್ಧಾರಕ್ಕೂ ಹೈಕಮಾಂಡ್ಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಈವರೆಗೂ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಇವತ್ತಿನ ಈ ನಿಲುವು ನನ್ನ ಮನೆಯವರಿಗೆ ಬಿಟ್ಟು, ಯಾರ ಬಳಿಯೂ ಚರ್ಚೆ ಮಾಡಿ ತೀರ್ಮಾನ ಮಾಡಿಲ್ಲ. ಕೆಲವರು 13 ಜನರಿಗೆ ಟಿಕೆಟ್ ಇಲ್ಲ ಸದಾನಂದಗೌಡರಿಗೂ ಟಿಕೆಟ್ ಇಲ್ಲ ಅಂತ ಚರ್ಚೆ ಮಾಡಿದ್ದರು. ಆದರೆ ಅದು ನೂರಕ್ಕೆ ನೂರು ಸುಳ್ಳು. ಯಡಿಯೂರಪ್ಪ ಅವರು ವ್ಯತ್ಯಾಸ ಹೇಳಿಕೆ ನೀಡಿದ್ದರು. ಆದರೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದರು. ಹಾಗಾಗಿ ನಾನು ಅವರ ಬಗ್ಗೆಯೂ ಹೇಳಿಕೆ ನೀಡಲ್ಲ ಎಂದರು.