ಬೆಂಗಳೂರು:ವಿಜಯನಗರವನ್ನು ಹೊಸ ಜಿಲ್ಲೆ ಮಾಡುವ ಪರವಾಗಿ ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಜಯನಗರವನ್ನು ಹೊಸ ಜಿಲ್ಲೆ ಮಾಡುವ ಪ್ರಸ್ತಾಪ ಇತ್ತು. ಹೊಸ ಜಿಲ್ಲೆ ಮಾಡಬಹುದೆಂದು ಡಿಸಿ ವರದಿ ನೀಡಿದ್ದು, ಈ ವರದಿಯನ್ನು ಸಿಎಂಗೆ ಕಳುಹಿಸಲಾಗಿದೆ. ಸಿಎಂ ಆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ವಿಜಯನಗರ ಹೊಸ ಜಿಲ್ಲೆ ಮಾಡುವಂತೆ ಆನಂದ್ ಸಿಂಗ್ ಪ್ರಸ್ತಾಪ ಸಲ್ಲಿಸಿದ್ದರು. ಇದಕ್ಕೆ ಬಳ್ಳಾರಿ ಜಿಲ್ಲಾ ನಾಯಕರಿಂದಲೇ ವಿರೋಧ ವ್ಯಕ್ತವಾಗಿತ್ತು. ಇದೀಗ ಡಿಸಿ ಹೊಸ ಜಿಲ್ಲೆ ರಚಿಸುವ ಪರವಾಗಿ ವರದಿ ನೀಡಿದ್ದಾರೆ ಎಂದರು.
ಕಪಾಲ ಬೆಟ್ಟ ವರದಿಗೆ ಆತುರ ಏನೂ ಇಲ್ಲ:ಕಪಾಲ ಬೆಟ್ಟಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದೇವೆ. ಅವರು ಸಮಯಾವಕಾಶ ಬೇಕು ಅಂದಿದ್ದಾರೆ. ಹೀಗಾಗಿ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಆತುರ ಇಲ್ಲ ಎಂದು ತಿಳಿಸಿದರು. ಟ್ರಸ್ಟ್ ಡೀಡ್ನಲ್ಲಿ ಪ್ರತಿಮೆ ಕಟ್ಟಲು ಅನುಮತಿ ಇಲ್ಲ. ಯಾವುದೇ ಅನುಮತಿ ಪಡೆಯದೇ ಬೆಟ್ಟದಲ್ಲಿ ನಿರ್ಮಾಣ ಕಾರ್ಯ ನಡೆಸಲಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟ ಪಡಿಸಿದರು.