ಕರ್ನಾಟಕ

karnataka

ETV Bharat / state

8 ಸಾವಿರ ಕೋಟಿ ಬಿಡುಗಡೆ ಮಾಡಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ: ಹೆಚ್.ಡಿ. ದೇವೇಗೌಡ ಮನವಿ - ಹೆಚ್ ಡಿ ದೇವೇಗೌಡ

8 ಸಾವಿರ ಕೋಟಿ ಬಿಡುಗಡೆ ಮಾಡಬೇಕು, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

HD Devegowda  ಮೇಕೆದಾಟು ಯೋಜನೆ  ಹೆಚ್ ಡಿ ದೇವೇಗೌಡ  ಏತ ನೀರಾವರಿ ಯೋಜನೆ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ

By ETV Bharat Karnataka Team

Published : Jan 12, 2024, 9:31 PM IST

ಬೆಂಗಳೂರು:''ನೀತಿ ಆಯೋಗದ ಶಿಫಾರಸ್ಸಿನಂತೆ ಏತ ನೀರಾವರಿ ಯೋಜನೆಗಳಿಂದ ಕುಡಿಯುವ ನೀರು ಪೂರೈಕೆಗೆ ಅವಕಾಶ ನೀಡಬೇಕು. ನೀರಾವರಿ ಯೋಜನೆಗಳಿಗೆ ಕೂಡಲೇ 8 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಮೇಕೆದಾಟು ಯೋಜನೆಗೆ ಅನುಮೋದನೆ ನೀಡಬೇಕು'' ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಸ್ಥಾಯಿ ಸಮಿತಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮನವಿ ಮಾಡಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಸ್ಥಾಯಿ ಸಮಿತಿ ಸಭೆ ನಡೆಯಿತು. ವಿವಿಧ ರಾಜ್ಯಗಳ ನಂತರ ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಸಂಸದ ಶಿವಕುಮಾರ್ ಉದಾಸಿ ಪಾಲ್ಗೊಂಡಿದ್ದರು. ಸಭೆಯಲ್ಲಿ ನೀರಾವರಿ ಯೋಜನೆಗಳ ಕುರಿತು ವಿಶೇಷವಾಗಿ ಕಾವೇರಿ ಕೊಳ್ಳದ ಯೋಜನೆಗಳ ಕುರಿತು ದೇವೇಗೌಡರು ಸಮಗ್ರವಾದ ಮಾಹಿತಿ ನೀಡಿ ರಾಜ್ಯದ ಪರವಾಗಿ ಹಕ್ಕೊತ್ತಾಯ ಮಂಡಿಸಿದರು.

ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಗೌಡರು, ''ಇಂದು ನಡೆದ ಸಭೆಯಲ್ಲಿ ಕೂಡಲೇ ರಾಜ್ಯಕ್ಕೆ 8 ಸಾವಿರ ಕೋಟಿ ಹಣ ಬಿಡುಗಡೆಗೆ ಬೇಡಿಕೆ ಇಟ್ಟಿದ್ದೇವೆ. ಹಣ ಬಿಡುಗಡೆ ಸಂಬಂಧ ಪ್ರಯತ್ನದ ಭರವಸೆ ನೀಡಿದ್ದಾರೆ. ಕಾವೇರಿ ಕೊಳ್ಳದ ಹತ್ತು ಜಿಲ್ಲೆಗಳಲ್ಲಿ ಏತ ನೀರಾವರಿ ಮೂಲಕವೇ ಕುಡಿಯುವ ನೀರು ಕೊಡುವ ಕೆಲಸ ಮಾಡಬೇಕಿದೆ. ಒಂದು ಲಕ್ಷ ಎಕರೆಗೂ ಕಡಿಮೆ ಇರುವ ಕಡೆ ನೀರೆತ್ತಿ ಕೊಡಬಹುದು ಎಂದು ನೀತಿ ಆಯೋಗವೇ ಹೇಳಿರುವಾಗ ನಮಗೆ ಯಾಕೆ ವಿರೋಧ? ತಮಿಳುನಾಡಿಗೆ ಮಾತ್ರ ನೀರೆತ್ತುವ ಯೋಜನೆಗಳನ್ನು ಆನಂದವಾಗಿ ಮಾಡಲು ಅವಕಾಶವಿದೆ ನಾವೇನು ಆಗಿದ್ದೇವೆ. ನಾವೂ ಈ ದೇಶದ ಪ್ರಜೆಗಳು, ನಮಗೂ ನೀರು ಬಳಕೆಗೆ ಅವಕಾಶ ನೀಡಬೇಕು'' ಎಂದು ಮನವಿ ಮಾಡಿದರು.

''20 ಜಿಲ್ಲೆಗಳ ವ್ಯಾಪ್ತಿಯ ಕೃಷ್ಣಾ ಕೊಳ್ಳದಲ್ಲಿ ಸಮಸ್ಯೆ ಇಲ್ಲ, ಅದಕ್ಕೆ ಬೇಕಾದ ಹಣ ಬರುತ್ತದೆ. ಆದರೆ, ಕಾವೇರಿ ಕೊಳ್ಳದಲ್ಲಿ ನಮಗೆ ಬಹಳ ಸಮಸ್ಯೆಯಾಗಿದೆ. ಹಿಂದೆ ಕಾವೇರಿ ವಿವಾದದ ಅಂತಿಮ ತೀರ್ಮಾನ ಆಗಿರಲಿಲ್ಲ. ಆದರೆ, ಈಗ ತೀರ್ಪು ಬಂದು ಎಲ್ಲ ಮುಗಿದಿದೆ. ಹಾಗಾಗಿ ಕಾವೇರಿ ಕೊಳ್ಳಕ್ಕೂ ಹಣ ಕೊಡಿ ಎಂದು ಮನವಿ ಮಾಡಿದ್ದೇವೆ'' ಎಂದರು.

''ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಮೇಕೆದಾಟು ಯೋಜನೆಗೆ ತಮಿಳುನಾಡಿನವರು ತಕರಾರು ಮಾಡುತ್ತಾರೆ ಎಂದು ನಮಗೆ ತೊಂದರೆ ಮಾಡಬೇಡಿ. ದಯಮಾಡಿ ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ ಎಂದಿದ್ದೇವೆ. ತಮಿಳುನಾಡಿನವರು ಹೊಗೇನಕಲ್ ನಿಂದ ಆನಂದವಾಗಿ ಎಲ್ಲ ಜಿಲ್ಲೆಗೆ ನೀರು ಕೊಡುತ್ತಿದ್ದಾರೆ. ಪ್ರತಿ ಹಳ್ಳಿಗೂ ನೀರು ಕೊಡುತ್ತಿದ್ದಾರೆ. ನಾನು ಖುದ್ದಾಗಿ ಇದನ್ನು ನೋಡಿದ್ದೇನೆ. ಆದರೆ, ನಾವೇನು ಪಾಪ ಮಾಡಿದ್ದೇವೆ. ಕುಡಿಯುವ ನೀರಿಗೆ ಅವಕಾಶವಿಲ್ಲದಂತಾಗಿದೆ. ಇದನ್ನು ಮನವರಿಕೆ ಮಾಡಿದ್ದೇವೆ. ನಮ್ಮ ಹಣದಿಂದ ನಾವು ಅಣೆಕಟ್ಟು ಕಟ್ಟಲಿದ್ದೇವೆ. ನಮ್ಮ ರಾಜ್ಯ ಸರ್ಕಾರವೂ ಇದನ್ನೇ ಹೇಳಿದೆ. ಹಾಗಾಗಿ ಯೋಜನೆಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ'' ಎಂದು ತಿಳಿಸಿದರು.

''ನೀರೇ ಬರದ ಕಡೆಯಲ್ಲೂ ವ್ಯಾಜ್ಯ ಮಾಡುತ್ತಾರೆ. ಎಲ್ಲದಕ್ಕೂ ತಮಿಳುನಾಡು ವ್ಯಾಜ್ಯ ಮಾಡುತ್ತಿದೆ. ಮಳೆ ಸಂಬಂಧ ಸ್ವಾಮಿನಾಥನ್ ಸಮಿತಿ ವರದಿ ಕೊಟ್ಟಿದೆ. ಬೆಳೆ ನಷ್ಟವಾಗಲ್ಲ ಎಂದಿದ್ದಾರೆ. ಶೇ.90 ರಷ್ಟು ಅವರಿಗೆ ಮಾನ್ಸೂನ್ ನೀರು ಸಿಗಲಿದೆ. ನಮಗೆ ಶೇ.10 ರಷ್ಟು ಮಾತ್ರ ಸಿಗಲಿದೆ ಎನ್ನುವ ಅಂಶವನ್ನು ಗಮನಕ್ಕೆ ತಂದಿದ್ದೇನೆ. ಹಣ ಬಿಡುಗಡೆ ಮಾಡಿ, ಕರ್ನಾಟಕಕ್ಕೆ ಕಷ್ಟ ಇದೆ. ಹಾಗಾಗಿ 8 ಸಾವಿರ ಕೋಟಿ ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದೇವೆ. ಕಾವೇರಿ ಕೊಳ್ಳದ ವ್ಯಾಜ್ಯದಲ್ಲಿ ತೀರ್ಪು ಬಂದಿದೆ. ಹಾಗಾಗಿ ಹಣ ಬಿಡುಗಡೆ ಮಾಡಬೇಕು. ಇಲ್ಲಿ ಹಣ ಇಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದ್ದು, ಹಣ ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದೇವೆ'' ಎಂದು ವಿವರಿಸಿದರು.

''ಒಂದು ಲಕ್ಷ ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಏತ ನೀರಾವರಿ ಮಾಡಬಹುದು ಎಂದು ನೀತಿ ಆಯೋಗ (ಪ್ಲಾನಿಂಗ್ ಕಮೀಷನ್) ಹೇಳಿದೆ. ತಮಿಳುನಾಡಿನವರು ಹಾರಂಗಿ, ಹೇಮಾವತಿ, ಕಬಿನಿ, ಕೆಆರ್​ಎಸ್​ನಿಂದ ಎಲ್ಲ ನೀರು ಬಳಸಿಕೊಂಡು ನೀರಾವರಿ ಮಾಡುತ್ತಾರೆ ಎಂದು ಆರೋಪಿಸುತ್ತಿದೆ. ಆದರೆ, ಈ ರೀತಿ ಎಲ್ಲೂ ನೀರಾವರಿ ಮಾಡುತ್ತಿಲ್ಲ. ನಮ್ಮಲ್ಲಿ ಯಾವುದೇ ಯೋಜನೆ ಹಿಂಭಾಗದಲ್ಲಿ ಒಂದು ಲಕ್ಷ ಎಕರೆ ನೀರಾವರಿ ಮಾಡುವ ಜಲಾಶಯಗಳಿಲ್ಲ. ನುಗು, ಕುಣಿಗಲ್ ಬಳಿ ಎರಡು ಯೋಜನೆ 5-10 ಸಾವಿರ ಎಕರೆ ನೀರಾವರಿ ಯೋಜನೆಯಷ್ಟೆ, ಯಾವುದೇ ಒಂದು ಏತ ನೀರಾವರಿ ಯೋಜನೆ 10 ಸಾವಿರ ಎಕರೆಯೂ ಬರಲ್ಲ. ಲಕ್ಷ ಎಕರೆಗೂ ಕಡಿಮೆ ನೀರುಣಿಸುವ ಏತ ನೀರಾವರಿ ಯೋಜನೆಗಳಿಂದ ಕುಡಿಯುವ ನೀರೆತ್ತಿಕೊಳ್ಳಲು ನೀತಿ ಆಯೋಗವೇ ತೀರ್ಮಾನ ಮಾಡಿದೆ. ಈಗ ತಮಿಳುನಾಡಿನವರು ನಾವು ಎಲ್ಲ ನೀರು ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಿದ್ದಾರೆ ಎಲ್ಲಿಗೆ ಬಳಸಿಕೊಳ್ಳುತ್ತಿದ್ದೇವೆ'' ಎಂದು ಅವರು ಪ್ರಶ್ನಿಸಿದರು.

''ಕುಡಿಯುವ ನೀರಿಗೆ ತಿರುಪೆ ಬೇಡಬೇಕಾದ ಶಬ್ದಪ್ರಯೋಗ ಮಾಡಿದ್ದೆ ಅದನ್ನೆಲ್ಲಾ ವಿವರಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡಿದ್ದೇನೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ತರೀಕೆರೆ, ಕಡೂರು ಈ ಭಾಗ ಕಷ್ಟದಲ್ಲಿದೆ ಹಾಗಾಗಿ ಯೋಜನೆ ಮಾಡಲೇಬೇಕು ಎಂದಿದ್ದೇನೆ. ನೀರೆತ್ತುವ ಮಾಪನದ ಪ್ರಕಾರ ನೀರೆತ್ತಬೇಕು. ಕುಡಿಯುವ ಅಗತ್ಯತೆಗೆ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇನೆ'' ಎಂದು ವಿವರ ನೀಡಿದರು.

''ನಮ್ಮ ಮನವಿ ಆಲಿಸಿದ ಕೇಂದ್ರ ಜಲ ಆಯೋಗದ ಜಂಟಿ ಕಾರ್ಯದರ್ಶಿ ಸುಭೋದ್ ಯಾದವ್, ನೀವು ಹೇಳಿದ್ದು ಸತ್ಯವಿದೆ. ಆದರೆ, ನಾವೇನು ಮಾಡಲಾಗುತ್ತದೆ. ನೀವು ಹೇಳುವುದನ್ನು ಸರ್ಕಾರಕ್ಕೆ ಹೇಳುತ್ತೇವೆ ಅಷ್ಟೆ. ಎಲ್ಲವನ್ನೂ ವರದಿ ಮಾಡಲಿದ್ದೇವೆ. ಕೇಂದ್ರ ಸರ್ಕಾರ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರು ನಿಯಂತ್ರಣ ಸಮಿತಿ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ'' ಎಂದು ಅವರು ತಿಳಿಸಿದರು.

''ಕಾವೇರಿ ನೀರು ಬಳಕೆ ವಿಚಾರದಲ್ಲಿ ನಾನು ರಾಜ್ಯಸಭೆಯಲ್ಲಿ ಧ್ವನಿ ಎತ್ತುತ್ತೇನೆ, ಹೋರಾಡುತ್ತೇನೆ, ಶಿವಕುಮಾರ್ ಉದಾಸಿ ಚುನಾವಣೆಗೆ ನಿಲ್ಲಲ್ಲ ಎಂದಿದ್ದಾರೆ. ಇಂತಹ ಯೋಗ್ಯ ಪ್ರಮಾಣಿಕ ವ್ಯಕ್ತಿ ಸಂಸದರಾಗಬೇಕು, ಎಲ್ಲ ವಿಷಯದಲ್ಲೂ ನೈಪುಣ್ಯತೆ ಇದೆ ಇವರೆಲ್ಲಾ ಸಂಸತ್ತಿನಲ್ಲಿ ಇರಬೇಕು'' ಎಂದರು.

ಇದನ್ನೂ ಓದಿ:ಜ.22 ರಂದು ರಾಜ್ಯದ ರಾಮಮಂದಿರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ: ಸಿಎಂ

ABOUT THE AUTHOR

...view details