ಕರ್ನಾಟಕ

karnataka

ETV Bharat / state

ಮುಕ್ತ ಆವಿಷ್ಕಾರಕ್ಕೆ ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ ಜಾರಿ.. ಬೆಂಗಳೂರು ಟೆಕ್ ಸಮಿಟ್ 2019 ಅಂತ್ಯ

‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ’ ಜಾರಿ ನಿರ್ಧಾರ ಕೇವಲ ಈ ಸಭೆಯ ಘೋಷಣೆಯಲ್ಲ. ಯೋಜನೆಗೆ ಈಗಾಗಲೇ ಚಾಲ್ತಿ ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥ್‌ ನಾರಾಯಣ ಹೇಳಿದ್ದಾರೆ.

By

Published : Nov 20, 2019, 11:13 PM IST

ಬೆಂಗಳೂರು ಟೆಕ್ ಸಮಿಟ್

ಬೆಂಗಳೂರು:ಆವಿಷ್ಕಾರಗಳಿಗೆ ಪೂರಕವಾಗಿ ಕಾನೂನು ಪ್ರಕ್ರಿಯೆಯಲ್ಲಿ ಸುಧಾರಣೆ ತರುವುದು ಈಗಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ’ಜಾರಿಗೆ ತರಲು ನಿರ್ಧರಿಸಿದೆ ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥ್‌ ನಾರಾಯಣ ಬುಧವಾರ ತಿಳಿಸಿದರು.

ಬೆಂಗಳೂರು ಟೆಕ್ ಸಮಿಟ್-2019

ಬೆಂಗಳೂರು ಅರಮನೆಯಲ್ಲಿ ನವೆಂಬರ್‌ 18ರಿಂದ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮಿಟ್‌ನ ಸಮಾರೋಪ ಸಮಾರಂಭದ ಭಾಷಣದಲ್ಲಿ, ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಿದರು.

‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ’ ಜಾರಿ ನಿರ್ಧಾರ ಕೇವಲ ಈ ಸಭೆಯ ಘೋಷಣೆಯಲ್ಲ. ಯೋಜನೆಗೆ ಈಗಾಗಲೇ ಚಾಲ್ತಿ ನೀಡಿದ್ದೇವೆ. ಗೌರವಾನ್ವಿತ ರಾಜ್ಯಪಾಲರು ಇದೇ ನವೆಂಬರ್‌ 9 ರಂದು ‘ಕರ್ನಾಟಕ ಆವಿಷ್ಕಾರ ಪ್ರಾಧಿಕಾರ’ ಸ್ಥಾಪಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ್ದರು. ಈ ಪ್ರಾಧಿಕಾರವು ರಾಜ್ಯದಲ್ಲಿ ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ರಚನೆಗೆ ಕಾನೂನು ರೂಪುರೇಷೆ ನಿರ್ಧರಿಸುವುದು. ಅಧಿವೇಶನಕ್ಕೆ ಕಾಯದೇ ಈ ಸುಗ್ರೀವಾಜ್ಞೆ ಅಂಗೀಕರಿಸಿರುವುದನ್ನು ಗಮನಿಸಿಯೇ, ನಾವು ಈ ವಿಷಯಕ್ಕೆ ನೀಡಿರುವ ಆದ್ಯತೆಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬಹುದು ಎಂದರು.

ಸ್ಯಾಂಡ್‌ ಬಾಕ್ಸ್‌ ನೀತಿ: ಆವಿಷ್ಕಾರಗಳಿಗೆ ಯಾವುದೇ ರೀತಿಯ ಕಾನೂನು ತೊಡಕುಗಳು ಎದುರಾಗದಂತೆ ಸಂಸ್ಥೆಗಳಿಗೆ 2 ವರ್ಷಗಳವರೆಗೆ ವಿನಾಯಿತಿ ನೀಡಲಾಗುವುದು. ಯಾವುದೇ ಒಂದು ನಿರ್ದಿಷ್ಟ ವಲಯಕ್ಕೆ ಸೀಮಿತಗೊಳಿಸದೇ ಎಲ್ಲ ವಲಯಗಳಿಗೂ ಅನ್ವಯವಾಗುವಂಥ ‘ಸ್ಯಾಂಡ್‌ಬಾಕ್ಸ್‌ ನೀತಿ’ಯನ್ನು ಮೊದಲ ಬಾರಿಗೆ ನಾವು ಪರಿಚಯಿಸುತ್ತಿದ್ದೇವೆ. ಈ ಆಡಳಿತ ಕ್ರಮದಡಿ, ಆವಿಷ್ಕಾರ ಸಂಸ್ಥೆಗಳು ಈ ಯೋಜನೆಯ ಭಾಗವಾಗಲು ಅರ್ಜಿ ಸಲ್ಲಿಸಬಹುದು. ಈ ಉಪಕ್ರಮದಿಂದ ಉದ್ಯೋಗಾವಕಾಶ ಹೆಚ್ಚಳದ ಜತೆಗೆ, ಆರ್ಥಿಕತೆ ಸುಧಾರಣೆ ಆಗುತ್ತದೆ ಎಂಬ ಅಚಲ ವಿಶ್ವಾಸವೂ ನನಗಿದೆ ಎಂದರು

ನವೋದ್ಯಮಕ್ಕೆ ವಿಷನ್‌ ಗ್ರೂಪ್‌:ಸಭೆಯ ಎರಡನೇ ಘೋಷಣೆ ಸಹ ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ನವೋದ್ಯಮಗಳಿಗೂ ವಿಷನ್‌ ಗ್ರೂಪ್‌ ಪರಿಚಯಿಸುವ ಆದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವೆಂಬರ್‌ 12ರಂದು ಸಹಿ ಹಾಕಿದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಎರಡು ವಿಷನ್‌ ಗ್ರೂಪ್‌ಗಳಿದ್ದವು. ವಿಷನ್‌ ಗ್ರೂಪ್‌ ಫಾರ್‌ ಐಟಿ (ವಿಜಿಐಟಿ) ಮತ್ತು ವಿಷನ್‌ ಗ್ರೂಪ್‌ ಫಾರ್‌ ಬಿಟಿ (ವಿಜಿಬಿಟಿ)- ಸರ್ಕಾರದೊಂದಿಗೆ ಸಂಪರ್ಕ ಸಾಧಿಸಲು ಬೇಕಾದಂಥ ವ್ಯವಸ್ಥೆಯ ಅಗತ್ಯವನ್ನು ಈ ವಿಷನ್‌ ಗ್ರೂಪ್‌ಗಳು ಪೂರೈಸುತ್ತವೆ. ಹೊಸ ವಿಷನ್‌ ಗ್ರೂಪ್‌ ಸೇರಿದಂತೆ ನಾವು ರಚಿಸಿರುವ ಎಲ್ಲ ಮೂರು ವಿಷನ್‌ ಗ್ರೂಪ್‌ಗಳು ವರ್ಷದಲ್ಲಿ ಎರಡು ಬಾರಿ ಅಲ್ಲ. ತಿಂಗಳಿಗೊಮ್ಮೆ ಸಭೆ ಸೇರುತ್ತೇವೆ. ಈ ಸಂಬಂಧ ಯಾವುದೇ ನೆರವಿಗಾಗಿ ಅವರು ನನಗೆ ಕರೆ ಮಾಡುವ ಅಗತ್ಯ ಇಲ್ಲ. ಅವರೊಂದಿಗೆ ಸದಾ ಸಂಪರ್ಕದಲ್ಲಿರಲು ನಾನೇ ಒಂದು ವಾಟ್ಸಪ್‌ ಗ್ರೂಪ್‌ ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು.

ಟ್ಯಾಲೆಂಟ್‌ ಆಕ್ಸಿಲರೇಟರ್:ಈ ಸಭೆಯಲ್ಲಿ ಟ್ಯಾಲೆಂಟ್‌ ಆಕ್ಸಿಲರೇಟರ್‌ ಹಾಗೂ ಕರ್ನಾಟಕ ತಾಂತ್ರಿಕ ಅಭಿವೃದ್ಧಿ ಮಂಡಳಿ ಈ ಎರಡು ಪರಿಕಲ್ಪನೆಗಳನ್ನು ಪ್ರಸ್ತುಪಡಿಸುತ್ತಿದ್ದೇನೆ. ಮೊದಲನೆಯದು ಪ್ರತಿಭೆಗೆ ಒತ್ತು (ಟ್ಯಾಲೆಂಟ್‌ ಆಕ್ಸಿಲರೇಟರ್) ನೀಡುವ ಪರಿಕಲ್ಪನೆ - ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವನಾಗಿ, ಪದವೀಧರರ ಕೌಶಲ್ಯದ ಗುಣಮಟ್ಟ ಮತ್ತು ಉದ್ಯಮದ ನಿರೀಕ್ಷೆ ಪರಸ್ಪರ ತಾಳೆ ಆಗುತ್ತಿಲ್ಲ ಎಂಬ ಅರಿವು ನನಗಿದೆ. ಆದ್ಯತೆಯ ಮೇರೆಗೆ ಸಮಸ್ಯೆ ನಿವಾರಿಸಲು ಕಾರ್ಯತಂತ್ರದ ಅವಶ್ಯಕತೆಯಿದ್ದು, ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಇದು ಇನ್ನಷ್ಟು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜಿನ ಪ್ರತಿಭ್ವಾನಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನಿರ್ದಿಷ್ಟ ಉದ್ಯಮದ ವತಿಯಿಂದ ಕೌಶಲ್ಯ ಅಭಿವೃದ್ಧಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ವಿಶೇಷವಾಗಿ 2 ಮತ್ತು 3ನೇ ಹಂತದ ನಗರಗಳು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ವೇತನ ನಿಯಮ ಸೇರಿ, ಈಗಿರುವ ಕಾನೂನಿನಲ್ಲೇ ಬದಲಾವಣೆ ತರುವ ಮೂಲಕ ತಾಂತ್ರಿಕ ಉದ್ಯಮದಲ್ಲಿ ಕೌಶಲ್ಯ ಕಲಿಕೆ (ಅಪ್ರೆಂಟಿಸ್‌ಶಿಪ್)ಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುವುದು. ನ್ಯೂ ಏಜ್‌ ಇನ್‌ಕ್ಯೂಬೇಷನ್‌ ನೆಟ್‌ವರ್ಕ್‌(ಎನ್‌ಎಐಎನ್‌) ಸೇರಿ ಅಸ್ಥಿತ್ವದಲ್ಲಿರುವ ಯೋಜನೆಗಳ ಪುನರುಜ್ಜೀವನ ಮತ್ತು ವಿಸ್ತರಣೆಗೆ ಒತ್ತು ನೀಡಲಾಗುವುದು. ರಾಜ್ಯದ ಯುವ ಜನರ ಏಳಿಗೆಗೆ ಶ್ರಮಿಸುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಉದ್ಯಮದ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ತಾಂತ್ರಿಕ ಅಭಿವೃದ್ಧಿ ಮಂಡಳಿ:ಕರ್ನಾಟಕ ತಾಂತ್ರಿಕ ಅಭಿವೃದ್ಧಿ ಮಂಡಳಿ (ಕೆಟಿಡಿಬಿ) ಕರ್ನಾಟಕದಲ್ಲಿರುವ ತಂತ್ರಜ್ಞಾನ ಸಂಸ್ಥೆಗಳಿಗೆ ದೇಶ ಮತ್ತು ವಿದೇಶಗಳಿಂದ ಹೂಡಿಕೆಯನ್ನು ಆಕರ್ಷಿಸುವ ಜತೆಗೆ ತಾಂತ್ರಿಕ ಕಾರಿಡಾರ್‌ಗಳನ್ನು ಬೆಂಗಳೂರಿನಿಂದಾಚೆಗೂ (ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮತ್ತು ಹುಬ್ಬಳ್ಳಿ-ಧಾರವಾಡ) ವಿಸ್ತರಿಸಲು ಮೂಲಸೌಕರ್ಯಗಳ ಸುಧಾರಣೆಗೆ ಪ್ರಯತ್ನಿಸುವುದು. ಪರವಾನಗಿ, ಅಂಗೀಕಾರ ಮತ್ತು ಮೂಲಸೌಕರ್ಯವೂ ಸೇರಿ ಇನ್ನಿತರ ವಿಷಯಗಳ ಬಗ್ಗೆ ರಾಜ್ಯ ಮತ್ತು ಪುರಸಭೆಗಳ ಜತೆ ಸಂವಾದ ನಡೆಸಲು ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದು ಈ ಮಂಡಳಿಯ ಪ್ರಮುಖ ಜವಾಬ್ದಾರಿ ಎಂದು ವಿವರಿಸಿದರು.

ಬೆಂಗಳೂರಿಗೆ ಮೂಲ ಸೌಕರ್ಯ:ನಮ್ಮ ಬೆಂಗಳೂರಿನ ಮೂಲಸೌಕರ್ಯ ಸುಧಾರಣೆ ಅತಿ ದೊಡ್ಡ ಸವಾಲಾಗಿದ್ದು, ಸಮರೋಪಾದಿಯಲ್ಲಿ ಸಮಸ್ಯೆ ಇತ್ಯರ್ಥ ಪಡಿಸುವ ಪ್ರಯತ್ನ ನಡೆಯುತ್ತಿದೆ. ಸಂಚಾರ ವ್ಯವಸ್ಥೆ, ಪರಿಸರ ಸಂರಕ್ಷಣೆ, ಘನ ತ್ಯಾಜ್ಯ ನಿರ್ವಹಣೆ, ಕೆರೆ ಮತ್ತು ಕಾಡುಗಳ ರಕ್ಷಣೆ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲಾಗಿದೆ. ಆದ್ಯತೆಯ ಮೇರೆಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು ಜಾರಿ ಸಂಸ್ಥೆಗಳಿಗೆ ಸೂಚಿಸಲಾಗಿದೆ. 12 ಅತಿ ದಟ್ಟಣೆಯ ಕಾರಿಡಾರ್‌ಗಳು, ಪ್ರತ್ಯೇಕ ಬಸ್‌ ಪಥಗಳು, ಮೆಟ್ರೊ 2-3ನೇ ಹಂತ, ಸಬ್‌ ಅರ್ಬನ್‌ ರೈಲ್ವೆ, ಫೆರಿಫರಲ್‌ ರಿಂಗ್‌ ರಸ್ತೆ ಅಭಿವೃದ್ಧಿ ಮೂಲಕ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಬಹುದು. ಈ ಪೈಕಿ ಹಲವು ಅಂಶಗಳನ್ನು ಈಗಾಗಲೇ ಅನುಷ್ಠನಗೊಳಿಸಲಾಗಿದ್ದು, ಅದರ ಫಲಿತಾಂಶ ಶೀಘ್ರದಲ್ಲೇ ನಿಮ್ಮ ಗಮನಕ್ಕೂ ಬರಲಿದೆ ಎಂದರು.


ಉದ್ದಿಮೆದಾರರಿಂದ ನಿರೀಕ್ಷೆ:ಸರ್ಕಾರ ಮತ್ತುಉದ್ದಿಮೆಯ ಪರಸ್ಪರ ಗ್ರಹಿಕೆಯಲ್ಲಿರುವ ವ್ಯತ್ಯಾಸ ಹಾಗೂ ನಿರೀಕ್ಷೆಗಳು ಏನೇ ಇದ್ದರೂ, ಒಟ್ಟಿಗೆ ಕೆಲಸ ಮಾಡುವ ಉತ್ಸಾಹ ಎಂದೂ ಕುಗ್ಗಿಲ್ಲ. ಹಾಗಾಗಿ ನನ್ನ ನಿರೀಕ್ಷೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಮೊದಲನಯದಾಗಿ, ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುವಂಥ ಮಾಹಿತಿ ಮತ್ತು ಹೊಸ ಐಡಿಯಾಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ, ತಂತ್ರಜ್ಞಾನದ ಅತ್ಯುತ್ತಮ ಬಳಕೆಯ ಸೂಕ್ತ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಜತೆ ನೀವೂ ಕೈ ಜೋಡಿಸಿ. ನನ್ನಿಂದ ಬಗೆಹರಿಸಲು ಸಾಧ್ಯವಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟನಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯದಿರಿ ಎಂದು ಉದ್ದಿಮೆದಾರರಿಗೆ ಕರೆ ನೀಡಿದರು.

ಉದ್ಯಮವನ್ನು ಬಲಪಡಿಸಲು ಹೂಡಿಕೆ, ಸರ್ಕಾರದ ಸೌಲಭ್ಯಗಳು ಹಾಗೂ ರಕ್ಷಣಾತ್ಮಕ ಕ್ರಮಗಳಷ್ಟೇ ಸಾಲದು ಎಂಬ ಅಂಶ ನನಗೆ ಅರ್ಥವಾಗಿದೆ. ಅನ್ವೇಷಣೆ, ಅಭಿವೃದ್ಧಿ ಹಾಗೂ ಸ್ಪರ್ಧೆಗಿಳಿಯಲು ಪೂರಕವಾದ ವಾತಾವರಣ ಕಲ್ಪಿಸುವ ಅಗತ್ಯ ಹೆಚ್ಚಿದೆ. 1991ರ ಮೊದಲು ಸರ್ಕಾರವು ವಾಣಿಜ್ಯ ವ್ಯವಹಾರಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿತ್ತು. 1991ರ ನಂತರ ಸರ್ಕಾರ ಪೋಷಣೆಯ ಜವಬ್ದಾರಿ ವಹಿಸಿಕೊಂಡಿತು. ಈಗ ‘ಸರ್ಕಾರದ ಹಸ್ತಕ್ಷೇಪ ಕಡಿಮೆ, ಸುಲಲಿತ ಕ್ರಮಗಳೇ ಹೆಚ್ಚು’ ಎಂಬ ಸೂತ್ರ ಚಾಲ್ತಿಯಲ್ಲಿದೆ. ಹಾಗಾಗಿ ಆವಿಷ್ಕಾರಗಳಿಗೆ ಪೂರಕವಾದ ಕಾನೂನು ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ಯತ್ನಿಸಿದ್ದೇವೆ ಎಂದರು.

ABOUT THE AUTHOR

...view details