ಕರ್ನಾಟಕ

karnataka

ETV Bharat / state

ಪ್ರಾಂತ್ಯವಾರು ಫಲಿತಾಂಶ: ಮೈಸೂರು, ಕಿತ್ತೂರು ಕರ್ನಾಟಕದಲ್ಲಿ 'ಕೈ'ಗೆ ಜೈ ಎಂದ ಮತದಾರರು

ಸರ್ಕಾರ ರಚನೆಯ ಉತ್ಸಾಹದಲ್ಲಿರುವ ಕಾಂಗ್ರೆಸ್​ ಪ್ರಾಂತ್ಯವಾರು ಫಲಿತಾಂಶದಲ್ಲೂ ಕೂಡ ಆಡಳಿತಾರೂಢ ಬಿಜೆಪಿಗಿಂತ ​ಮುಂದಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​​ ಸ್ಥಾನಗಳನ್ನು ಕೊಳ್ಳೆ ಹೊಡೆದಿದೆ.

ಪ್ರಾಂತ್ಯವಾರು ಫಲಿತಾಂಶದ ವಿವರ
ಪ್ರಾಂತ್ಯವಾರು ಫಲಿತಾಂಶದ ವಿವರ

By

Published : May 13, 2023, 9:19 AM IST

Updated : May 13, 2023, 3:31 PM IST

ಬೆಂಗಳೂರು:ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಪ್ರಕ್ರಿಯೆ ಕೊನೆಯ ಘಟ್ಟ ತಲುಪುತ್ತಿದ್ದು, ಕಾಂಗ್ರೆಸ್​ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತ ಬಿಜೆಪಿ 64 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ. ಪ್ರಾಂತ್ಯವಾರು ಫಲಿತಾಂಶ ನೋಡುವುದಾದರೆ ಅಲ್ಲಿಯೂ ಕಾಂಗ್ರೆಸ್​ ಮುಂದಿದೆ.

ಹಳೆ ಮೈಸೂರು ಭಾಗದಲ್ಲಿ ಆಡಳಿತಾರೂಢ ಬಿಜೆಪಿ ಕೇವಲ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್​ 38 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಜೆಡಿಎಸ್​ 14, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್​ ಭದ್ರಕೋಟೆಯಾಗಿದ್ದ ಈ ಭಾಗದಲ್ಲಿ ಕಾಂಗ್ರೆಸ್​ ಭರ್ಜರಿ ಯಶಸ್ಸು ಗಮನಾರ್ಹ.

ಪ್ರಾಂತ್ಯವಾರು ಫಲಿತಾಂಶದ ವಿವರ

ಇದಲ್ಲದೇ, ಕಾಂಗ್ರೆಸ್ ಪಕ್ಷವು​ ಕಿತ್ತೂರು ಕರ್ನಾಟಕ ಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ. ಇಲ್ಲಿ 33 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಬಿಜೆಪಿ ಬಲವಾದ ಪೆಟ್ಟು ಕೊಟ್ಟಿದೆ. ಕಲ್ಯಾಣ ಕರ್ಣಾಟಕದಲ್ಲಿ 26, ಬೆಂಗಳೂರು 16, ಮಧ್ಯ ಕರ್ನಾಟಕದಲ್ಲಿ 17 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆಯುವ ಮೂಲಕ ರಾಜ್ಯಾದ್ಯಂತ ಎಲ್ಲ ಪ್ರದೇಶಗಳಲ್ಲೂ ತನ್ನ ಶಕ್ತಿ ಪ್ರದರ್ಶಿಸಿದೆ.

ಬಿಜೆಪಿ ಹಿಂದಿನ ಚುನಾವಣೆಗಳಲ್ಲಿ ಪಡೆದ ಬಹುತೇಕ ಸ್ಥಾನಗಳನ್ನು ಎಲ್ಲ ಪ್ರಾಂತ್ಯಗಳಲ್ಲೂ ಕಳೆದುಕೊಂಡಿದೆ. ಕಿತ್ತೂರು ಕರ್ನಾಟಕದಲ್ಲಿ 16 ಸ್ಥಾನ ಪಡೆದಿದ್ದೇ ಪಕ್ಷದ ಉತ್ತಮ ಸಾಧನೆ ಎಂದು ಹೇಳಬಹುದು. ಮೈಸೂರು ಭಾಗದಲ್ಲಿ 6 ಸ್ಥಾನ ಸಿಕ್ಕಿದೆ. ಗೃಹ ಸಚಿವ ಅಮಿತ್​ ಶಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಕೇಂದ್ರ, ರಾಜ್ಯ ನಾಯಕರು ಭರ್ಜರಿ ಪ್ರಚಾರ ನಡೆಸಿದಾಗ್ಯೂ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿಲ್ಲ.

ಜೆಡಿಎಸ್​ಗೆ ಮರ್ಮಾಘಾತ:ಮೈಸೂರು ಭಾಗದಲ್ಲಿ ಕಳೆದ ಬಾರಿ 31 ಸ್ಥಾನಗಳನ್ನು ಗೆದ್ದು ಪಾರಮ್ಯ ಮೆರೆದಿದ್ದ ಜೆಡಿಎಸ್​ ಈ ಬಾರಿ ಧೂಳೀಪಟವಾಗಿದೆ. ಅರ್ಧಕ್ಕೂ ಅಧಿಕ ಸ್ಥಾನಗಳನ್ನು ಕಳೆದುಕೊಂಡು ತೀವ್ರ ಹಿನ್ನಡೆ ಅನುಭವಿಸಿದೆ. ಸದ್ಯ 14 ಸ್ಥಾನಗಳಲ್ಲಿ ಮುಂದಿದೆ. ಅಂದರೆ 17 ಸ್ಥಾನಗಳನ್ನು ಅದು ಕಳೆದುಕೊಂಡಿದೆ. ಈ ಎಲ್ಲ ಕ್ಷೇತ್ರಗಳನ್ನು ಕಾಂಗ್ರೆಸ್​ ಕೊಳ್ಳೆ ಹೊಡೆದಿದೆ.

ಮೇ 10 ರಂದು ನಡೆದ ಮತದಾನದಲ್ಲಿ ಹಳೆ ಮೈಸೂರು ಭಾಗದಲ್ಲಿ ಅಧಿಕ ಮತದಾನವಾಗಿದೆ. ಇಲ್ಲಿ ಶೇ 75 ರಷ್ಟು ಮತದಾನವಾಗಿತ್ತು. ಬೆಂಗಳೂರು ಪ್ರದೇಶದಲ್ಲಿ ಕಡಿಮೆ, ಸುಮಾರು ಶೇ.50 ರಷ್ಟು ಮಾತ್ರ ಹಕ್ಕು ಚಲಾವಣೆಯಾಗಿತ್ತು.

ಪ್ರಾಂತ್ಯವಾರು ಎರಡನೇ ಅತಿಹೆಚ್ಚು ಮತದಾನವಾಗಿದ್ದು ಕರಾವಳಿ ಪ್ರದೇಶದಲ್ಲಿ. ಮಧ್ಯ ಕರ್ನಾಟಕ ಭಾಗದಲ್ಲಿ ಶೇ 70 ರಷ್ಟು, ಕಿತ್ತೂರು ಕರ್ನಾಟಕದಲ್ಲಿ ಶೇ 68 ರಷ್ಟು ಮತ ಹಕ್ಕು ಚಲಾವಣೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟಾರೆ ಶೇಕಡಾ 62 ರಷ್ಟು, ಪ್ರಾಂತ್ಯವಾರು ಮತದಾನದಲ್ಲಿ ಕೊನೆಯ ಸ್ಥಾನದಲ್ಲಿರುವ ಬೆಂಗಳೂರು ಪ್ರದೇಶದಲ್ಲಿ ಸರಾಸರಿ ಶೇಕಡಾ 50 ರಷ್ಟು ಮತದಾನವಾಗಿದೆ.

ಇದನ್ನೂ ಓದಿ:ಚುನಾವಣಾ ಫಲಿತಾಂಶ ಕುರಿತು ಡಿ.ಕೆ. ಶಿವಕುಮಾರ್ ಅವರ ಭಾವುಕ ಪ್ರತಿಕ್ರಿಯೆ

Last Updated : May 13, 2023, 3:31 PM IST

ABOUT THE AUTHOR

...view details