ಬೆಂಗಳೂರು: ರಾಜ್ಯದ ಚುನಾವಣಾ ಅಖಾಡ ದಿನೇ ದಿನೆ ರಂಗೇರುತ್ತಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ಭರಾಟೆಯಲ್ಲಿದ್ದು, ಇನ್ನು ಚುನಾವಣಾ ರಣಕಣದಲ್ಲಿ ಜಿದ್ದಾಜಿದ್ದಿನ ಕಾವು ಇನ್ನಷ್ಟು ತಾರಕಕ್ಕೇರಲಿದೆ. ರಾಜ್ಯದಲ್ಲಿ ಏನಿದ್ದರೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆಯೇ ಪೈಪೋಟಿ. ಸದ್ಯ ಪ್ರಾದೇಶಿಕವಾರು ಪಕ್ಷಗಳ ಬಲಾಬಲ ಏನಿದೆ ಎಂಬ ಚಿತ್ರಣ ಇಲ್ಲಿದೆ.
ರಾಜ್ಯದಲ್ಲಿ ಈಗೇನಿದ್ದರೂ ಚುನಾವಣಾ ಪರ್ವ. ರಾಜಕೀಯ ಪಕ್ಷಗಳು ಗದ್ದುಗೆ ಹಿಡಿಯಲು ಇನ್ನಿಲ್ಲದ ಕಸರತ್ತು ಆರಂಭಿಸಿವೆ. ಅದರಲ್ಲೂ ಸ್ಪಷ್ಟ ಬಹುಮತದ ನಿರೀಕ್ಷೆಯೊಂದಿಗೆ ಎಲ್ಲಾ ಪಕ್ಷಗಳು ಕಾರ್ಯತಂತ್ರ ಹೆಣೆದಿದೆ. ರಾಜ್ಯ ಚುನಾವಣಾ ಅಖಾಡವನ್ನು ಪ್ರಾದೇಶಿಕವಾರು ಆರು ಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ.
ಬೆಂಗಳೂರು, ಹಳೆ ಮೈಸೂರು, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಹೀಗೆ ಆರು ಭಾಗಗಳನ್ನಾಗಿ ನೋಡಲಾಗುತ್ತದೆ. ಪ್ರಾದೇಶಿಕವಾರು ಈ ಆರು ಭಾಗಗಳಲ್ಲಿ ರಾಜ್ಯದ ಮೂರು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಚುನಾವಣಾ ತಂತ್ರಗಾರಿಕೆ ನಡೆಸುತ್ತದೆ.
ಮೂರೂ ಪಕ್ಷಗಳು ಪ್ರಾದೇಶಿಕವಾರು ಆರು ಭಾಗಗಳಲ್ಲಿ ಅಲ್ಲಿನ ಪ್ರದೇಶವಾರು ಅಂಶಗಳೊಂದಿಗೆ ಚುನಾವಣಾ ಕಣಕ್ಕೆ ಇಳಿಯುತ್ತವೆ. ಒಂದೊಂದು ಭಾಗ ಪ್ರಬಲ ಸಮುದಾಯಗಳ ಪ್ರಾಬಲ್ಯ ಹೊಂದಿರುವ ಪ್ರದೇಶಗಳಾಗಿವೆ. ರಾಜಕೀಯ ಪಕ್ಷಗಳು ಪ್ರದೇಶಕ್ಕನುಗುಣವಾಗಿ ಕಾರ್ಯತಂತ್ರ ರೂಪಿಸಿ ಹೆಚ್ಚಿನ ಸೀಟು ಗೆಲ್ಲಲು ಕಸರತ್ತು ನಡೆಸುತ್ತಿದೆ.
ಈ ಆರು ಪ್ರಾದೇಶಿಕವಾರು ವಲಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತನ್ನದೇ ಆದ ಪ್ರಾಬಲ್ಯ ಹೊಂದಿವೆ. ಒಂದೊಂದು ಭಾಗ ಒಂದೊಂದು ಪಕ್ಷಗಳ ಭದ್ರಕೋಟೆಗಳಾಗಿವೆ. ಸದ್ಯ ಈ ಆರು ಪ್ರದೇಶವಾರು ಭಾಗಗಳಲ್ಲಿನ ಮೂರು ಪಕ್ಷಗಳ ಬಲಾಬಲ ಹೇಗೆ ರಾಜ್ಯ ರಾಜಕೀಯ ಚಿತ್ರಣವನ್ನು ರೂಪಿಸಿದೆ ಎಂಬುದನ್ನು ನೋಡೋಣ.
2018ರ ಫಲಿತಾಂಶದ ಪಕ್ಷಗಳ ಬಲಾಬಲ: 2018ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಂದಿನಂತೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. 2018ರಲ್ಲಿ ರಾಜ್ಯದ ಒಟ್ಟು 224 ಸೀಟುಗಳ ಪೈಕಿ 222 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಈ ಪೈಕಿ ಬಿಜೆಪಿ ಅತಿ ಹೆಚ್ಚು 104 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ 78 ಕ್ಷೇತ್ರಗಳಲ್ಲಿ ಮತ್ತು ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ನಡೆದ ಎರಡು ವಿಧಾನಸಭೆ ಕ್ಷೇತ್ರಗಳಾದ ಆರ್.ಆರ್.ನಗರ ಹಾಗೂ ಜಯನಗರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ತನ್ನ ಒಟ್ಟು ಬಲವನ್ನು 80ಕ್ಕೆ ಏರಿಸಿತ್ತು.
2018ರ ಚುನಾವಣೆಯಲ್ಲಿ ಮೂರು ಪಕ್ಷಗಳ ಮಧ್ಯೆಯೇ ಜಿದ್ದಾಜಿದ್ದಿನ ಚುನಾವಣಾ ಸಮರ ನಡೆಯಿತು. ಕಳೆದ ಬಾರಿಯ ಚುನಾವಣೆಯಲ್ಲಿ ಒಟ್ಟು 3,63,82,748 ಮತ ಚಲಾವಣೆ ಆಗಿದ್ದವು. ಒಟ್ಟು 72.36% ಮತದಾನ ಆಗಿತ್ತು. 104 ಸ್ಥಾನ ಗೆದ್ದಿದ್ದ ಬಿಜೆಪಿ 36.22% ಮತಪಾಲು ಪಡೆದಿತ್ತು.
ಅಂದರೆ, 1,32,68,284 ಮತಗಳು ಬಿಜೆಪಿಗೆ ಬಿದ್ದಿದ್ದವು. ಇನ್ನು 78 ಕ್ಷೇತ್ರ ಗೆದ್ದ ಕಾಂಗ್ರೆಸ್ 38.04% ಮತಪಾಲು ಪಡೆದಿತ್ತು. ಕಾಂಗ್ರೆಸ್ ಪರ 2018ರ ಚುನಾವಣೆಯಲ್ಲಿ ಒಟ್ಟು 1,39,32,531 ಮತಗಳು ಬಿದ್ದಿದ್ದವು. ಇನ್ನು 37 ಸೀಟು ಗೆದ್ದ ಜೆಡಿಎಸ್ 18.36% ವೋಟ್ ಶೇರ್ ಪಡೆದಿತ್ತು. ಜೆಡಿಎಸ್ ಪರ 67,26,668 ಮತಗಳು ಚಲಾಯಿಸಲಾಗಿತ್ತು ಎಂದು ಚುನಾವಣಾ ಆಯೋಗದ ಅಂಕಿಅಂಶದಲ್ಲಿ ತಿಳಿಸಲಾಗಿದೆ. ಪ್ರದೇಶವಾರು ಪಕ್ಷಗಳ ಬಲಾಬಲ:
ಬೆಂಗಳೂರು ನಗರ:ಬೆಂಗಳೂರು ನಗರದಲ್ಲಿ ಒಟ್ಟು 28 ಕ್ಷೇತ್ರಗಳಿವೆ. ಬೆಂಗಳೂರು ನಗರದಲ್ಲಿ ಯಾವತ್ತೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಪೈಪೋಟಿ ಇರುತ್ತೆ. ಜೆಡಿಎಸ್ ಬೆಂಗಳೂರು ನಗರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿಲ್ಲ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 13 ಸ್ಥಾನ ಗೆದ್ದಿತ್ತು. ಬಿಜೆಪಿ 12 ಸ್ಥಾನ ಗೆದ್ದರೆ, ಜೆಡಿಎಸ್ 3 ಸ್ಥಾನ ಗೆದ್ದಿತ್ತು.
ಇನ್ನು 2018ರ ಚುನಾವಣೆಯಲ್ಲೂ ಹೆಚ್ಚಿನ ಬದಲಾವಣೆ ಆಗಿರಲಿಲ್ಲ. 26 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13 ಗೆದ್ದರೆ, ಬಿಜೆಪಿ 11 ಹಾಗೂ ಜೆಡಿಎಸ್ 2 ಸ್ಥಾನದಲ್ಲಿ ಜಯಭೇರಿ ಭಾರಿಸಿತ್ತು. 2018ರಲ್ಲಿ ಬೆಂಗಳೂರು ನಗರದ ಕ್ಷೇತ್ರಗಳಲ್ಲಿ ಬಿಜೆಪಿ 39.2% ಮತ ಪಾಲು ಗಳಿಸಿತ್ತು. ಅದೇ ಕಾಂಗ್ರೆಸ್ 2018ರಲ್ಲಿ ಬೆಂಗಳೂರಿನ ಕ್ಷೇತ್ರದಲ್ಲಿ 39.65% ಮತಪಾಲು ಪಡೆದಿತ್ತು. ಇನ್ನು ಜೆಡಿಎಸ್ 18.38% ಮತಪಾಲು ಗಳಿಸಿತ್ತು.
ಹಳೆ ಮೈಸೂರು:ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ. ಈ ಭಾಗದಲ್ಲಿ ಸುಮಾರು 60 ಸ್ಥಾನಗಳಿವೆ. ಅದರೂ ಇತ್ತೀಚಿನ ಚುನಾವಣೆಗಳಲ್ಲಿ ಈ ಭಾಗದಲ್ಲಿ ಮೂರು ಪಕ್ಷಗಳ ಮಧ್ಯೆ ಪೈಪೋಟಿ ಇರುತ್ತದೆ. ಕಾಂಗ್ರೆಸ್ ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ಇರುತ್ತೆ. 2013ರಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ 25 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಅದೇ ಕಾಂಗ್ರೆಸ್ ಪಕ್ಷ ಸುಮಾರು 27 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇನ್ನು ಬಿಜೆಪಿ 8 ಸ್ಥಾನ ಗೆದ್ದಿತ್ತು.
2018ರಲ್ಲಿ ಜೆಡಿಎಸ್ ಪಕ್ಷ ಸುಮಾರು 31 ಸ್ಥಾನ ಗೆದ್ದು, ತನ್ನ ಹಿಡಿತವನ್ನು ಸದೃಢಗೊಳಿಸಿತ್ತು. ಇನ್ನು ಕಾಂಗ್ರೆಸ್ ಪಕ್ಷ ಸುಮಾರು 19 ಸ್ಥಾನಕ್ಕೆ ಕುಸಿತ ಕಂಡಿತ್ತು. ಇನ್ನು ಬಿಜೆಪಿ 10 ಸ್ಥಾನ ಗೆದ್ದು ಉತ್ತಮ ಪ್ರದರ್ಶನ ನೀಡಿತ್ತು. ಹಳೆ ಮೈಸೂರಿನಲ್ಲಿ 2018ರಲ್ಲಿ ಬಿಜೆಪಿ 20.7% ಮತಪಾಲು ಪಡೆದಿತ್ತು. ಕಾಂಗ್ರೆಸ್ ಸುಮಾರು 34.97% ಮತಪಾಲು ಗಳಿಸಿತ್ತು. ಅದೇ ಜೆಡಿಎಸ್ 40.88% ವೋಟ್ ಶೇರ್ ಪಡೆದಿತ್ತು.
ಕರಾವಳಿ ಕರ್ನಾಟಕ: ಕರಾವಳಿ ಕರ್ನಾಟಕ ಒಟ್ಟು 19 ಕ್ಷೇತ್ರಗಳನ್ನು ಹೊಂದಿದೆ. ಕರಾವಳಿ ಕರ್ನಾಟಕದಲ್ಲಿ ಜಾತಿ ಲೆಕ್ಕಾಚಾರಗಿಂತ ಹಿಂದುತ್ವ ವಿಚಾರ ಚುನಾವಣಾ ಅಜೆಂಡಾ ಆಗಿರುತ್ತದೆ. ಹಾಗಾಗಿ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ತನ್ನ ಹಿಡಿತವನ್ನು ಬಲ ಪಡಿಸುತ್ತಿದೆ. ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಿದ್ದಾಜಿದ್ದು ಇರುತ್ತದೆ. 2013ರ ಚುನಾವಣೆಯಲ್ಲಿ ಬಿಜೆಪಿ ಕರಾವಳಿ ಕರ್ನಾಟಕದಲ್ಲಿ ಕೇವಲ 3 ಸ್ಥಾನ ಗೆದ್ದಿತ್ತು. ಅದೇ ಕಾಂಗ್ರೆಸ್ ಸುಮಾರು 16 ಸ್ಥಾನವನ್ನು ಗೆದ್ದು ಬೀಗಿತ್ತು.
2018ರಲ್ಲಿ ಈ ಫಲಿತಾಂಶ ಉಲ್ಟಾ ಆಗಿತ್ತು. ಬಿಜೆಪಿ ತನ್ನ ಹಿಡಿತದ ಸುಮಾರು 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕರಾವಳಿ ಕರ್ನಾಟಕದಲ್ಲಿ 2018ರಲ್ಲಿ ಬಿಜೆಪಿ ವೋಟ್ ಶೇರ್ 51.6%. ಇನ್ನು ಕಾಂಗ್ರೆಸ್ 37.05% ಮತಪಾಲು ಪಡೆದಿತ್ತು. ಜೆಡಿಎಸ್ ಪಕ್ಷ 5.47% ಮತಪಾಲಿಗೆ ತೃಪ್ತಿ ಪಟ್ಟುಕೊಂಡಿತ್ತು.
ಕಿತ್ತೂರು ಕರ್ನಾಟಕ: ಕಿತ್ತೂರು ಕರ್ನಾಟಕ ಭಾಗ ಸುಮಾರು 50 ಕ್ಷೇತ್ರಗಳನ್ನು ಹೊಂದಿದೆ. ಈ ಭಾಗದಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ಪೈಪೋಟಿ. ಈ ಕ್ಷೇತ್ರದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯಕ್ಕೆ. ಹಾಗಾಗಿ ಬಿಜೆಪಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ಮೇಲುಗೈ ಸಾಧಿಸುತ್ತಿದೆ. 2013ರ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ 34 ಸ್ಥಾನ ಗೆದ್ದಿದ್ದರೆ, ಬಿಜೆಪಿ 14 ಸ್ಥಾನ ಗೆದ್ದಿತ್ತು. ಅದೇ ಜೆಡಿಎಸ್ 1 ಸ್ಥಾನ ಗೆದ್ದಿತ್ತು.
2018ರಲ್ಲಿ ಇಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಬಿಜೆಪಿ ಈ ಭಾಗದಲ್ಲಿ ಸುಮಾರು 30 ಸ್ಥಾನ ಗೆದ್ದಿತ್ತು. ಅದೇ ಕಾಂಗ್ರೆಸ್ 16 ಸ್ಥಾನ ಗೆದ್ದಿತ್ತು. ಜೆಡಿಎಸ್ 2 ಕ್ಷೇತ್ರದಲ್ಲಿ ಗೆದ್ದಿತ್ತು. 2018ರಲ್ಲಿ ಬಿಜೆಪಿ ಸುಮಾರು 44.3% ಮತಪಾಲು ಹೊಂದಿತ್ತು. ಕಾಂಗ್ರೆಸ್ 39.44% ವೋಟ್ ಶೇರ್ ಪಡೆದಿತ್ತು. ಇನ್ನು ಜೆಡಿಎಸ್ 8.58% ವೋಟ್ ಶೇರ್ ಪಡೆದಿದ್ದರು.
ಕಲ್ಯಾಣ ಕರ್ನಾಟಕ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 40 ಸ್ಥಾನಗಳಿವೆ. ಈ ಭಾಗ ಕನಿಷ್ಠ ಅಭಿವೃದ್ಧಿ ಕಂಡ ಪ್ರದೇಶವಾಗಿದೆ. ಈ ಭಾಗದಲ್ಲಿ ಲಿಂಗಾಯತ ಹಾಗೂ ಎಸ್ ಸಿ ಸಮುದಾಯ ಬಹುಸಂಖ್ಯೆಯಲ್ಲಿ ಇದ್ದಾರೆ. ಈ ಭಾಗದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಇರುತ್ತದೆ.
ಕಾಂಗ್ರೆಸ್ ಈ ಭಾಗದಲ್ಲಿ ಸಾಮಾನ್ಯವಾಗಿ ಮೇಲುಗೈ ಸಾಧಿಸುತ್ತಿದೆ. 2013ರಲ್ಲಿ ಕಾಂಗ್ರೆಸ್ ಈ ಭಾಗದಲ್ಲಿ ಸುಮಾರು 18 ಕ್ಷೇತ್ರ ಗೆದ್ದಿತ್ತು. ಬಿಜೆಪಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಜೆಡಿಎಸ್ 4 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.
2018ರಲ್ಲಿ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಸುಮಾರು 15 ಸ್ಥಾನ ಗೆದ್ದು ಸ್ಥಾನ ಹೆಚ್ಚಿಸಿತ್ತು. ಅದೇ ಕಾಂಗ್ರೆಸ್ 21 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಇನ್ನು ಜೆಡಿಎಸ್ 4 ಸ್ಥಾನ ಗೆದ್ದಿತ್ತು. 2018ರಲ್ಲಿ ಬಿಜೆಪಿ ಈ ಭಾಗದಲ್ಲಿ ಸುಮಾರು 39.3% ಮತಪಾಲು ಪಡೆದಿತ್ತು. ಕಾಂಗ್ರೆಸ್ ಸುಮಾರು 42.19% ವೋಟ್ ಶೇರ್ ಗಳಿಸಿತ್ತು. ಜೆಡಿಎಸ್ 12.4% ಮತಪಾಲು ಪಡೆದಿತ್ತು.
ಮಧ್ಯ ಕರ್ನಾಟಕ: ಮಧ್ಯ ಕರ್ನಾಟಕ ಭಾಗದಲ್ಲಿ ಸುಮಾರು 30 ಕ್ಷೇತ್ರಗಳು ಇವೆ. ಈ ಕ್ಷೇತ್ರದಲ್ಲಿ ಲಿಂಗಾಯತ, ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಈ ಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇರುತ್ತದೆ. ಇತ್ತ ಜೆಡಿಎಸ್ ಕೂಡ ಕೆಲ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. 2013ರಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಸುಮಾರು 4 ಸ್ಥಾನ ಗೆದ್ದಿತ್ತು. ಜೆಡಿಎಸ್ 5 ಸ್ಥಾನ ಪಡೆದಿತ್ತು.
2018ರ ಚುನಾವಣೆಯಲ್ಲಿ ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಸುಮಾರು 21 ಸ್ಥಾನ ಗೆದ್ದು ಬೀಗಿತ್ತು. ಅದೇ ಕಾಂಗ್ರೆಸ್ 5 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಜೆಡಿಎಸ್ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. 2018ರಲ್ಲಿ ಈ ಭಾಗದಲ್ಲಿನ ವೋಟ್ ಶೇರ್ ಸುಮಾರು 32.5% ಇತ್ತು. ಕಾಂಗ್ರೆಸ್ ಮತಪಾಲು 35.2% ಮತಪಾಲು ಪಡೆದಿತ್ತು.
ಇದನ್ನೂಓದಿ:ಉತ್ತರ ಕನ್ನಡದ ಪ್ರಮುಖ ಅಭ್ಯರ್ಥಿಗಳೆಲ್ಲರೂ ಕೋಟ್ಯಧಿಪತಿಗಳೇ: ಆರ್.ವಿ.ದೇಶಪಾಂಡೆ ಆಸ್ತಿ ₹299 ಕೋಟಿ