ಬೆಂಗಳೂರು:ಮುಂಬೈ, ಪುಣೆ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರು ಸಿಎಂ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಬಳಿಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಕಳೆದ 20 ದಿನಗಳಿಗಿಂತಲೂ ಹೆಚ್ಚು ಕಾಲ ಅಜ್ಞಾತ ವಾಸದಲ್ಲಿರುವ ಅತೃಪ್ತರು ಇದೀಗ ಮುನ್ನೆಲೆಗೆ ಬರಲು ಸಿದ್ಧರಾಗಿದ್ದಾರೆ. ಮಂಗಳವಾರ ಮುಂಬೈಯಿಂದ ಬೆಂಗಳೂರಿಗೆ ವಾಪಸ್ಸಾಗಲು ಅತೃಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಅಲ್ಲಿವರೆಗೂ ಅತೃಪ್ತರು ಬೆಂಗಳೂರಿಗೆ ವಾಪಸ್ಸಾಗದಿರಲು ನಿರ್ಧರಿಸಿದ್ದಾರೆ. ವಿಶ್ವಾಸ ಮತಯಾಚನೆಯ ಮರುದಿನ ಅಂದರೆ ಮಂಗಳವಾರ ಬೆಂಗಳೂರಿಗೆ ಬರಲು ಯೋಚಿಸಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ ಸುದ್ದಿಗೋಷ್ಠಿ ನಡೆಸಲು ಅತೃಪ್ತರು ಮುಂದಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅತೃಪ್ತರು ಎಲ್ಲವನ್ನೂ ಬಹಿರಂಗಪಡಿಸಲಿದ್ದಾರೆ. ರಾಜೀನಾಮೆ ನೀಡಲು ಕಾರಣ, ಮುಂದಿನ ನಡೆ ಎಲ್ಲದರ ಬಗ್ಗೆಯೂ ಅತೃಪ್ತ ಶಾಸಕರು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಲಿದ್ದಾರೆ ಎನ್ನಲಾಗಿದೆ.
ಇತ್ತ ಅತೃಪ್ತರು ನಾವ್ಯಾರೂ ಸಿದ್ದರಾಮಯ್ಯರಿಗೆ ಕರೆ ಮಾಡಲು ಯತ್ನಿಸಿಲ್ಲ ಎಂದು ತಿಳಿಸಿದ್ದಾರೆ. ನಾವು ಯಾರೂ ಪಕ್ಷ ಬಿಡುವುದಿಲ್ಲ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಅಷ್ಟೇ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ನಮ್ಮ ನಿರ್ಧಾರದಲ್ಲಿ ನಾವು ಅಚಲರಾಗಿದ್ದೇವೆ ಎಂಬುದನ್ನು ಅತೃಪ್ತರು ಸ್ಪಷ್ಟಪಡಿಸಿದ್ದಾರೆ.