ಬೆಂಗಳೂರು:ಮತದಾರರ ಗುರುತಿನ ಚೀಟಿ ದಾಖಲೆ ಕಳ್ಳತನ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ದಾಖಲೆಯನ್ನು ನಾವು ಬಿಡುಗಡೆ ಮಾಡುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇರವಾಗಿ ಕಿಂಗ್ ಪಿನ್ ಆಗಿ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಸಾವಿರಕ್ಕೂ ಹೆಚ್ಚು ಕರೆ ಮಾಡಿ ಮಾತನಾಡಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವಾಗಿದ್ದು, ದಿನದಿಂದ ದಿನಕ್ಕೆ ಪ್ರತಿ ಗಂಟೆ ಸಾಕಷ್ಟು ದಾಖಲೆಗಳು ಹೊರ ಬೀಳುತ್ತಿವೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರುಗಳ ಹೆಸರು ಹೊರಬರುತ್ತಿದೆ. ನಾವು ಇಂದು 11 ಹೊಸ ಪ್ರಶ್ನೆ ಕೇಳಲು ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ವಿರುದ್ಧ ಏಕೆ ಪ್ರಕರಣ ದಾಖಲಾಗಿಲ್ಲ?: ಚಿಲುಮೆ ಮತದಾರರ ಗುರುತಿನ ಚೀಟಿ ಅಕ್ರಮವಾಗಿ ದಾಖಲೆ ಸಂಗ್ರಹಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಯಾಕೆ ಪ್ರಕರಣ ದಾಖಲಾಗಿಲ್ಲ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇರವಾಗಿ ಭಾಗಿಯಾಗಿದೆ ಎಂಬ ದಾಖಲೆ ನೀಡಿದ್ದೇವೆ. ಆದರೆ, ಇದರಲ್ಲಿ ಯಾವುದೇ ಆಧಾರ ಇಲ್ಲ ಎಂದು ಸರ್ಕಾರ ದೂರುತ್ತಿದೆ. ನಮ್ಮ ಆರೋಪ ಸಿಎಂ ವಿರುದ್ಧವೇ ಆಗಿರುವಾಗ ಅವರೇ ಅದನ್ನು ತಿರಸ್ಕರಿಸುತ್ತಾರೆ ಎಂದರು.
ಕನ್ನಡಿಗರ ಹಕ್ಕನ್ನು ಕಸಿದುಕೊಳ್ಳುವ ಕಾರ್ಯವನ್ನು ಸಿಎಂ ಮಾಡುತ್ತಿದ್ದಾರೆ. ಚಿಲುಮೆ ಹಾಗೂ ಡಿಎಪಿ ಹೊಂಬಾಳೆ ಸಂಸ್ಥೆ ವಿರುದ್ಧ, ಕೃಷ್ಣಪ್ಪ, ರವಿಕುಮಾರ್, ನರಸಿಂಹಮೂರ್ತಿ, ಐಶ್ವರ್ಯ, ವಿರುದ್ಧ ಯಾಕೆ ಎಫ್ಐಆರ್ ದಾಖಲಾಗಿಲ್ಲ. 28 ವಿಧಾನಸಭೆ ಕ್ಷೇತ್ರದ ಮತದಾರರ ಕೋಟ್ಯಂತರ ಮಂದಿಯ ದಾಖಲೆ ಕಳ್ಳತನವಾಗಿದೆ ಇದಕ್ಕೆ ಹೊಣೆ ಯಾರು? ಚಿಲುಮೆಗೆ ಯಾರು ಅನುದಾನ ನೀಡುತ್ತಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸುತ್ತಿಲ್ಲ. ಉಚಿತವಾಗಿ ಬಿಬಿಎಂಪಿ ಪರವಾಗಿ ಕೆಲಸ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
15 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು ನಿಜವೇ? ಈ ಸಂಬಂಧ ಜಾಹೀರಾತು ನೀಡಿದ್ದು ಸತ್ಯವೇ? ಚಿಲುಮೆ ತನ್ನ ಕಾರ್ಯಕ್ಕೆ ಉಪ ಗುತ್ತಿಗೆಯನ್ನು ಬೇರೊಂದು ಸಂಸ್ಥೆಗೆ ನೀಡಿದ್ದಾಗಿ ಒಂದು ಸಹಿ ಮಾಡದ ಪತ್ರ ಇದೆ. ಇದರ ಸತ್ಯಾಸತ್ಯತೆ ಏನು? ಇದರಲ್ಲಿ ಮತದಾರರು, ಸರ್ವೇದಾರರಿಗೆ ನಿಗದಿತ ಹಣ ನೀಡುವ ವಿಚಾರ ಪ್ರಸ್ತಾಪವಾಗಿದೆ. ಇದರ ಲೆಕ್ಕಾಚಾರ ಹಾಕಿದರೆ ಕೋಟ್ಯಂತರ ರೂ. ಆಗಲಿದೆ. ಇದಕ್ಕೆ ಹಣ ಎಲ್ಲಿಂದ ಬಂತು. ಸಿಬಿಐ, ಸಿಐಡಿ ಯಾಕೆ ಸುಮ್ಮನಿವೆ? ಎಂದು ಕೇಳಿದ್ದಾರೆ.