ಬೆಂಗಳೂರು:ಕಾಂಗ್ರೆಸ್ ನಾಯಕರನ್ನು ತೆಗಳುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರವಾಗಿ ರಾಜಸ್ಥಾನ ಬಿಜೆಪಿ ಶಾಸಕ ನೀಡಿರುವ ಅವಹೇಳನಕಾರಿ ಹೇಳಿಕೆ ಇದಕ್ಕೆ ತಾಜಾ ಉದಾಹರಣೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪವನ್ ಖೇರಾ ಜತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂದರ್ಭ ರಾಜಸ್ಥಾನ ಬಿಜೆಪಿ ಎಂಎಲ್ಎ ಹೇಳಿಕೆ ವೀಡಿಯೋ ಪ್ರದರ್ಶನ ಮಾಡಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ 80ವರ್ಷ ಆಗಿದೆ ಭಗವಂತ ಅವರನ್ನ ಬೇಗ ಕರೆದುಕೊಳ್ಳಲಿ. ಮಲ್ಲಿಕಾರ್ಜುನ ಖರ್ಗೆಯವರನ್ನು ದೇವರು ಯಾವಾಗ ಬೇಕಾದರೂ ಮೇಲಕ್ಕೆ ಕರೆದುಕೊಳ್ಳಬಹುದು ಎಂಬ ಮಾತನ್ನು ಬಿಜೆಪಿ ಶಾಸಕ ಆಡಿದ್ದು ಆ ವಿಡಿಯೋ ಪ್ರದರ್ಶನ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಬಿಜೆಪಿ ಶಾಸಕನ ನಿಲುವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಉದಾಹರಣೆ. ಖರ್ಗೆ ದೇಶದ ಅತ್ಯುನ್ನತ ದಲಿತ ನಾಯಕ. ಖರ್ಗೆ ಸೋಲಿಲ್ಲದ ಸರದಾರ. ಬಿಜೆಪಿ 40 ಸೀಟಿಗೆ ಸೀಮಿತವಾಗುತ್ತದೆ ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದರು. ನಿಮ್ಮ ಶಾಸಕರು ಖರ್ಗೆಯವರ ಸಾವು ಬಯಸುತ್ತಿದ್ದಾರೆ. ಮೋದಿಯವರೇ ಯಾಕೆ ಬಿಜೆಪಿಯ ಜನರಲ್ ಸೆಕ್ರೆಟರಿ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ಖರ್ಗೆಯ ಸಾವು ಬಯಸಿದ್ದರೂ ಏಕೆ ಮೌನವಾಗಿದ್ದಾರೆ?. ಕಾಂಗ್ರೆಸ್ ನಾಯಕರನ್ನು ತೆಗಳುವುದೇ ಬಿಜೆಪಿ ನಾಯಕರಿಗೆ ಹವ್ಯಾಸ ಆಗಿದೆ. ಅಶ್ವತ್ಥ ನಾರಾಯಣ ಸಚಿವರು ಮಂಡ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಲು ಕರೆ ನೀಡಿದ್ದರು. ಇದೀಗ ಅತ್ಯುನ್ನತ ದಲಿತ ನಾಯಕನ ಸಾವು ಬಯಸುತ್ತಿದ್ದೀರಿ. ಪ್ರಧಾನಿಯವರೇ ನೀವು ಕೇವಲ ಅಳುಮುಂಜಿ ಮಗು 'ಕ್ರೈ ಬೇಬಿ' ಆಗುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.