ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಲ್ಲಿಸಿರುವ ದೂರು ಆಧರಿಸಿ ದಾಖಲಿಸಿರುವ ಎಫ್ಐಆರ್ ಹಾಗೂ ಎಸ್ಐಟಿ ತನಿಖೆ ರದ್ದು ಕೋರಿ ಯುವತಿ ಸಲ್ಲಿಸಿರುವ ಅರ್ಜಿ ವಿಚಾರಣೆ ಜೂನ್ 23 ಕ್ಕೆ ಮುಂದೂಡಿಕೆಯಾಗಿದೆ.
ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ಹಾಗೂ ತನಿಖೆಯನ್ನು ರದ್ದುಕೋರಿ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾ. ಹರೀಶ್ ಶ್ರೀನಿವಾಸ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಯುವತಿ ಪರ ವಕೀಲರಾದ ಸಂಕೇತ್ ಏಣಗಿ ಪೀಠಕ್ಕೆ ಮಾಹಿತಿ ನೀಡಿ, ಹೈಕೋರ್ಟ್ ಸೂಚನೆಯಂತೆ ಹ್ಯಾಂಡ್ ಸಮನ್ಸ್ ಅನ್ನು ರಮೇಶ್ ಜಾರಕಿಹೊಳಿ ಸ್ವೀಕರಿಸಿಲ್ಲ ಎಂದರು.
ಹಾಗೆಯೇ, ಪ್ರಕರಣವನ್ನು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪೀಠಕ್ಕೆ ವರ್ಗಾಯಿಸುವಂತೆ ಕೋರಿದರು. ಅದರಂತೆ ಪೀಠ ಪ್ರಕರಣವನ್ನು ವರ್ಗಾವಣೆ ಮಾಡಲು ರಿಜಿಸ್ಟ್ರಿಗೆ ಸೂಚಿಸಿತು. ರಮೇಶ್ ಜಾರಕಿಹೊಳಿ ತಮ್ಮನ್ನು ರಾಜಕೀಯವಾಗಿ ಮುಗಿಸಲು ಆರೋಪಿಗಳು ನಕಲಿ ಸಿಡಿ ಸೃಷ್ಟಿಸಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿ ತಮ್ಮ ಆಪ್ತ ನಾಗರಾಜ್ ಮೂಲಕ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ನಡೆಸತ್ತಿರುವುದನ್ನು ರದ್ದುಪಡಿಸಬೇಕೆಂದು ಯುವತಿ ಕೋರಿದ್ದಾರೆ.
ಅಲ್ಲದೇ, ಎಸ್ಐಟಿ ಪೊಲೀಸರು ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳದೇ ಕೇವಲ ಶ್ರವಣ್, ನರೇಶ್ರನ್ನು ಗುರಿ ಮಾಡಿ ತನಿಖೆ ನಡೆಸುತ್ತಿದ್ದಾರೆ. ಇದರಿಂದ ತನಿಖೆಯ ಹಾದಿ ತಪ್ಪಿದಂತಾಗಿದೆ. ಹೀಗಾಗಿ ಪ್ರಕರಣ ರದ್ದುಪಡಿಸಬೇಕು ಎಂದು ಯುವತಿ ಕೋರಿದ್ದಾರೆ.
ಇದನ್ನೂ ಓದಿ:ಸಿಡಿ ಪ್ರಕರಣದಲ್ಲಿ ಕೈಕೊಟ್ಟ ರಾಜ್ಯ ನಾಯಕರು ; ಫಡ್ನವೀಸ್ ಬಾಗಿಲು ತಟ್ಟಿದ ರಮೇಶ್ ಜಾರಕಿಹೊಳಿ!