ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ ಡಿ ಪ್ರಕರಣ ಸಂಬಂಧಿಸಿದಂತೆ ಲಿಖಿತ ಸಾರಾಂಶವುಳ್ಳ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಉಭಯ ಪಕ್ಷಗಾರರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣದ ತನಿಖೆಗೆ ಎಸ್ಐಟಿ ರಚನೆಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ಪ್ರಕರಣದ ಎಫ್ಐಆರ್ ರದ್ದುಪಡಿಸುವಂತೆ ಹೈಕೋರ್ಟ್‌ಗೆ ಕೋರಿ ಪ್ರಕರಣದ ಸಂಸ್ಥೆ ಹಾಗೂ ಆರೋಪಿಗಳಾದ ಎಸ್ ಶ್ರವಣ್ ಕುಮಾರ್ ಹಾಗೂ ಬಿ ಎಂ ನರೇಶ್ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದರು.
ಲಿಖಿತ ಸಾರಾಂಶ ಸಲ್ಲಿಸುವಂತೆ ನಿರ್ದೇಶನ: ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಲಿಖಿತ ಸಾರಾಂಶ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ ವಕೀಲ ಮಯಾಂಕ್ ಜೈನ್ , ದಾಖಲೆಗಳ ಭಾಷಾಂತರ ಮತ್ತು ಲಿಖಿತ ವಾದಾಂಶವನ್ನು ಸಲ್ಲಿಸುವಂತೆ ಕಳೆದ ಬಾರಿ ನ್ಯಾಯಾಲಯ ಆದೇಶಿಸಿತು. ಆದರೆ ಅದನ್ನು ಪಾಲಿಸಲಾಗಿಲ್ಲ. ಇದನ್ನು ಎಲ್ಲ ಪಕ್ಷಕಾರರು ಸಲ್ಲಿಸಿಲ್ಲ ಎಂದು ಪೀಠದ ಗಮನಕ್ಕೆ ತಂದರು.
ಆಗಸ್ಟ್ 16ಕ್ಕೆ ವಿಚಾರಣೆ ಮುಂದೂಡಿಕೆ: ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆಯ ವೇಳೆಗೆ ಆಕ್ಷೇಪಣೆ, ವಿಚಾರಣೆಗಳ ಸಾರಾಂಶ, ಲಿಸ್ಟ್ ಆಫ್ ಅಥಾರಿಟಿಯನ್ನು ಎಲ್ಲ ಪಕ್ಷಕಾರರು ಸಲ್ಲಿಸಬೇಕು. ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿತು.