ಬೆಂಗಳೂರು: ನಾನು ಯಾವ ಬಣದಲ್ಲೂ ಇಲ್ಲ. ನಮ್ಮಲ್ಲಿ ಇರೋದು ಒಂದೇ ಬಣ, ಅದು ಕಾಂಗ್ರೆಸ್ ಮಾತ್ರ. ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಹೈಕಮಾಂಡ್ ಯಾವ ಜವಾಬ್ದಾರಿ ಕೊಡುತ್ತದೋ ಅದನ್ನು ನಿಭಾಯಿಸುತ್ತೇನೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕಾಂಗ್ರೆಸ್ ಬಣ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಕಾಂಗ್ರೆಸ್ ಬಣ. 27 ಅಥವಾ 28 ನೇ ತಾರೀಖು ಸಂಪುಟ ವಿಸ್ತರಣೆ ಆಗಬಹುದು. ರಾಜ್ಯಪಾಲರು ಬಂದ ತಕ್ಷಣ ಆಗುತ್ತೆ. ನಾನು ಯಾವತ್ತೂ ಖಾತೆಗೆ ಬೇಡಿಕೆ ಇಟ್ಟಿಲ್ಲ ಎಂದರು.
ಸಿಎಂ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಮಾತಾಡಬಾರದು. ನಾನೂ ಸೇರಿ ಯಾರೂ ಕೂಡ ಮಾತನಾಡಬಾರದು. ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದ್ರೆ ಪಕ್ಷಕ್ಕೆ ಡ್ಯಾಮೇಜ್. ಹೀಗಾಗಿ, ಯಾರೂ ಈ ಬಗ್ಗೆ ಮಾತನಾಡದೇ ಇರುವುದು ಉತ್ತಮ ಎಂದು ಹೇಳಿದರು.
ವೀರಪ್ಪ ಮೊಯ್ಲಿ ಬೇಸರ: ರಾಜ್ಯ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಹಾಗೂ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ, ಯಾರೂ ಕೂಡ ಪಕ್ಷದ ನಿಯಮಗಳನ್ನು ಉಲ್ಲಂಘಿಸಬಾರದು. ಬಹಿರಂಗವಾಗಿ ಅಧಿಕಾರ ಹಂಚಿಕೆ ಕುರಿತು ಹೇಳಿಕೆ ನೀಡುವುದು ಸರಿಯಲ್ಲ. ಸರ್ಕಾರ ಈಗಷ್ಟೇ ಅಸ್ತಿತ್ವಕ್ಕೆ ಬಂದಿದೆ. ಇಂತಹ ಹೊತ್ತಲ್ಲಿ ಯಾರೂ ಕೂಡ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ಯಾರಾದರೂ ಬಹಿರಂಗವಾಗಿ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಸಿಎಂ ಅಧಿಕಾರ ಹಂಚಿಕೆ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಅಧಿಕಾರ ಹಂಚಿಕೆ ಆಗದೇ ಸಿದ್ದರಾಮಯ್ಯ ಸಿಎಂ ಆಗ್ತಾರಾ?, ಎಂಟು ಮಂದಿ ಸಚಿವರು ಪ್ರಮಾಣ ವಚನ ತೆಗೆದುಕೊಳ್ತಾರಾ?. ಅದೆಲ್ಲವೂ ಹೈಕಮಾಂಡ್ ಹಂತದಲ್ಲಿ ಆಗಿರುತ್ತದೆ. ಅದರ ಬಗ್ಗೆ ಶಾಸಕರು ಯಾಕೆ ತಲೆಕೆಡಿಸಿಕೊಳ್ಳಬೇಕು. ಮೊದಲು ನಾವು ನೀಡಿರುವ ಭರವಸೆಗಳನ್ನು ಈಡೇರಿಸುವ ಕಡೆ ಗಮನ ಕೊಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.
ಇದನ್ನೂ ಓದಿ:ಸಚಿವ ಸಂಪುಟ ವಿಸ್ತರಣೆ ಕಸರತ್ತು: ದೆಹಲಿಗೆ ಪ್ರಯಾಣಿಸಿದ ಸಿಎಂ, ಡಿಸಿಎಂ
ಇನ್ನೊಂದೆಡೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿದೆ. ಆಕಾಂಕ್ಷಿಗಳ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮೊದಲ ಹಂತದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಒಟ್ಟು 8 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕಚೇರಿಯನ್ನು ನೀಡಲಾಗಿದೆ. ಆದರೆ, ಇದುವರೆಗೂ ಖಾತೆ ಹಂಚಿಕೆ ಆಗಿಲ್ಲ. ಪ್ರಭಾವಿ ಖಾತೆಗಾಗಿ 8 ಸಚಿವರು ಲಾಬಿ ನಡೆಸುತ್ತಿರುವ ನಡುವೆ ಬಾಕಿ ಉಳಿದಿರುವ 24 ಸ್ಥಾನಗಳಿಗೆ 80ಕ್ಕೂ ಹೆಚ್ಚು ಹಿರಿಯ, ಕಿರಿಯ ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ.