ಬೆಂಗಳೂರು:ಐಟಿ ಕಂಪನಿಗಳು ರಾಜಕಾಲುವೆ ಒತ್ತುವರಿ ಮಾಡಿಲ್ಲ, ಬಿಲ್ಡರುಗಳು ಒತ್ತುವರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಂದಾಯ ಸಚಿವ ಆರ್.ಅಶೋಕ್ ಐಟಿ ಕಂಪನಿಗಳು ರಾಜಕಾಲುವೆ ಒತ್ತುವರಿ ಮಾಡಿವೆ ಅಂದಿದ್ದಾರೆ. ಅದು ತಪ್ಪು ಮಾಹಿತಿ. ಐಟಿ ಕಂಪನಿಗಳು ಒತ್ತುವರಿ ಮಾಡಿಲ್ಲ. ಬಿಲ್ಡರ್ಗಳು ಒತ್ತುವರಿ ಮಾಡಿ ಕಟ್ಟಡ ಕಟ್ಟಿ, ಐಟಿ ಕಂಪನಿಗಳಿಗೆ ನೀಡಿದ್ದಾರೆ. ಸರ್ವೆ ಕಾರ್ಯ ಈಗಾಗಲೇ ಮುಗಿದಿದೆ. ಮಾರ್ಕ್ ಮಾಡಿದ ಜಾಗ ಬಿಟ್ಟು ಕೊಡಿ. ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.
ಮಹದೇವಪುರ ಕ್ಷೇತ್ರದಲ್ಲಿ ಸೆ.3, 4ರಂದು ಮಳೆಯಾದ ಪರಿಣಾಮ ಹೆಚ್ಚು ಪ್ರವಾಹ ಬಂದಿದೆ. ಬೆಂಗಳೂರಿನಲ್ಲಿ ಸುರಿದ ಮಳೆಯ ನೀರು ಮಹದೇವಪುರ ಕ್ಷೇತ್ರದ ಮೂಲಕ ಹರಿದ ಕಾರಣ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ. ಒತ್ತುವರಿ ಇದಕ್ಕೆ ಕಾರಣ. ಐದನೇ ತಾರೀಕಿನಿಂದ ಒತ್ತುವರಿ ತೆರವು ಕಾರ್ಯ ಆರಂಭಿಸಲಾಗಿದೆ. ಚಿಕ್ಕವರು ಮಾಡಿದ ಒತ್ತುವರಿ ಮಾತ್ರ ತೆರವು ಮಾಡುತ್ತಿಲ್ಲ. ದೊಡ್ಡ ಬಿಲ್ಡರ್ಗಳು ಕಟ್ಟಿದ ಕಟ್ಟಡಗಳ ಒತ್ತುವರಿ ತೆರವು ಕಾರ್ಯ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.