ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​ನಿಂದ ಲೋಕಸಭೆ ಚುನಾವಣೆಗೆ ತಾಲೀಮು: ರಾಹುಲ್​​ರಿಂದ ಸಿದ್ದರಾಮಯ್ಯ ಸರ್ಕಾರದ ಪರಾಮರ್ಶೆ..? - ಲೋಕಸಭೆ ಚುನಾವಣೆ

ಲೋಕಸಭೆ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ಹೈಕಮಾಂಡ್ ತಾಲೀಮು ಆರಂಭಿಸಿದ್ದು, ಸಿದ್ದರಾಮಯ್ಯ ಸರ್ಕಾರದ ಸಚಿವರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್​​ನಿಂದ ಲೋಕಸಭೆ ಚುನಾವಣೆಗೆ ತಾಲೀಮು
ಕಾಂಗ್ರೆಸ್​​ನಿಂದ ಲೋಕಸಭೆ ಚುನಾವಣೆಗೆ ತಾಲೀಮು

By

Published : Jul 15, 2023, 8:03 AM IST

ಬೆಂಗಳೂರು:ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಈ ಬಾರಿ ಸುಮಾರು 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. ಹೆಚ್ಚಿನ ಕ್ಷೇತ್ರ ಗೆಲ್ಲುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಚಿವರ ಮೇಲೆ ಹೆಚ್ಚಿನ ಒತ್ತಡ ಹಾಕಲು ಹೈಕಮಾಂಡ್ ಮುಂದಾಗಿದೆ.

ಮುಖ್ಯಮಮತ್ರಿ ಸಿದ್ದರಾಮಯ್ಯ ಸರ್ಕಾರದ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿನ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಟಾಸ್ಕ್​​ಅನ್ನು ಈಗಾಗಲೇ ಅವರಿಗೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಂದರ್ಭದಲ್ಲಿಯೇ ತಮ್ಮ ಉಸ್ತುವಾರಿ ಜಿಲ್ಲೆಯ ಲೋಕಸಭೆ ಕ್ಷೇತ್ರ ಗೆಲ್ಲುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ಗೆಲ್ಲಬೇಕೆಂದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಬೇಕು ಎನ್ನುವುದು ಕಾಂಗ್ರೆಸ್ ಹೈಕಮಾಂಡ್​​ನ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹೇಗಿದೆ..? ಸಚಿವರ ಕಾರ್ಯಕ್ಷಮತೆ ಯಾವ ರೀತಿ ಇದೆ..? ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹೇಗಿದೆ..? ಅನ್ನೋದನ್ನ ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪರಮರ್ಶೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರಲ್ಲಿ ಮುಂದಿನ ವಾರ 17 ಮತ್ತು 18ರಂದು ನಡೆಯುವ ಯುಪಿಎ ಮಿತ್ರಕೂಟದ ಪಕ್ಷಗಳ ಹಾಗೂ ಎನ್​​ಡಿಎ ವಿರೋಧ ಪಕ್ಷಗಳ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ರಾಹುಲ್ ಗಾಂಧಿಯವರು ಇದೇ ತಿಂಗಳ 19ರಂದು ರಾಜ್ಯ ಸರ್ಕಾರದ ಆಡಳಿತ ವೈಖರಿಯ ಪರಾಮರ್ಶೆ ನಡೆಸುವ ಆಶಯವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ತಿಂಗಳು ಆಗಿದ್ದು ಈವರೆಗೆ ಆಡಳಿತ ಹೇಗಿದೆ..? ಮುಂದಿನ ಅವಧಿಯ ಆಡಳಿತದ ಹೇಗಿರಬೇಕು..? ಇತ್ಯಾದಿ ಸಂಗತಿಗಳ ಬಗ್ಗೆ ರಾಹುಲ್ ಗಾಂಧಿಯವರು ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಜ್ಯ ಸರ್ಕಾರವು ಯಾವ ಯಾವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆ..? ಇನ್ನು ಯಾವ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರುವುದು ಬಾಕಿ ಇದೆ ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕೆಲವು ಸಲಹೆಗಳನ್ನು ರಾಹುಲ್ ಗಾಂಧಿ ಸಭೆಯಲ್ಲಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಆ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯನ್ನ ಅನುಷ್ಠಾನಗೊಳಿಸಿರುವುದನ್ನು ಪಕ್ಷದ ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡುವ ಉದ್ದೇಶವನ್ನು ಹೊಂದಿದೆ. ಗ್ಯಾರಂಟಿ ಅನುಷ್ಠಾನ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತು ಚುನಾವಣಾ ಆಶ್ವಾಸನೆ ಈಡೇರಿಸಿದ್ದನ್ನು ಮನವರಿಕೆ ಮಾಡಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತಂತೆ ರಾಹುಲ್ ಗಾಂಧಿ ಸಚಿವರ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ರಾಹುಲ್ ಗಾಂಧಿಯವರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ ಸಿ ವೇಣುಗೋಪಾಲ್, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಭಾಗವಹಿಸಲಿದ್ದಾರೆ.

ದೆಹಲಿಯಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ಜೊತೆ ಸಭೆ ನಡೆಸಿ ಲೋಕಸಭಾ ಚುನಾವಣೆಗೆ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಟಾರ್ಗೆಟ್ ನೀಡುವ ಉದ್ದೇಶವನ್ನು ರಾಹುಲ್ ಗಾಂಧಿ ಹೊಂದಿದ್ದರು. ಆದರೆ ಬೇರೆ ಕೆಲಸದಲ್ಲಿ ಬ್ಯುಸಿ ಹಾಗೂ ವಿದೇಶ ಪ್ರವಾಸದಿಂದ ಸಚಿವರ ಸಭೆಯನ್ನು ದೆಹಲಿಯಲ್ಲಿ ನಡೆಸಲು ರಾಹುಲ್ ಗಾಂಧಿಯವರಿಗೆ ಸಾಧ್ಯವಾಗಿರಲಿಲ್ಲ. ದೆಹಲಿಯಲ್ಲಿ ನಡೆಸಬೇಕಾಗಿದ್ದ ಸಚಿವರ ಸಭೆಯನ್ನು ಮುಂದಿನ ವಾರ ಬೆಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ನಡೆಸಲಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಸಭೆ: ರಾಹುಲ್ ಗಾಂಧಿ ಅವರು ಸಚಿವರ ಸಭೆ ನಡೆಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯನ್ನು 19 ರಂದು ಸಂಜೆ ಖಾಸಗಿ ಹೋಟೆಲ್​​ನಲ್ಲಿ ಕರೆದಿದ್ದಾರೆ. ಈ ಸಭೆಯಲ್ಲಿ ಶಾಸಕರ ಬೇಡಿಕೆಗಳು, ಕ್ಷೇತ್ರಗಳಿಗೆ ಅನುದಾನ ಹಂಚಿಕೆ, ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಲೋಕಸಭೆ ಚುನಾವಣೆಗೆ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯರು ಭಾಗವಹಿಸಲಿದ್ದಾರೆ.

ವರ್ಗಾವಣೆ ಭ್ರಷ್ಟಾಚಾರ ಆರೋಪ ಬಗ್ಗೆ ಚರ್ಚೆ:ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿರುವ ಸರ್ಕಾರಿ ನೌಕರರ ವರ್ಗಾವಣೆಯಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ಬೆಂಗಳೂರು ಭೇಟಿ ವೇಳೆ ರಾಹುಲ್ ಗಾಂಧಿ ಅವರು ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರದ ಆರೋಪಗಳು ವಿರೋಧ ಪಕ್ಷಗಳಿಗೆ ಅಸ್ತ್ರವಾಗಬಾರದು ಎನ್ನುವ ಕಳಕಳಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್​ಗಿದೆ.

ಇದನ್ನೂ ಓದಿ:ಅಮ್ಮನೊಂದಿಗೆ ವಾಸಿಸುತ್ತಿದ್ದ ರಾಹುಲ್‌ ಗಾಂಧಿ ಶೀಘ್ರದಲ್ಲೇ ಹೊಸ ಮನೆಗೆ ಶಿಫ್ಟ್‌

ABOUT THE AUTHOR

...view details