ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂದು ಇನ್ನೆರಡು ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಬೆಳವಣಿಗೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಸರ್ಕಾರದ ಪಾಪದ ಕೊಡ ತುಂಬಿದೆ. ಕಳೆದ 13 ತಿಂಗಳಿನಿಂದ ಜನರನ್ನು ಶೋಷಿಸಿ ಅಧಿಕಾರಕ್ಕೆ ಅಂಟಿಕೊಂಡು ಲೂಟಿ ಮಾಡುವುದರಲ್ಲಿ ಸರ್ಕಾರ ನಿರತವಾಗಿತ್ತು. ಈಗ ಶಾಸಕರ ರಾಜೀನಾಮೆಯಿಂದ ಒಂದು ರೀತಿಯಲ್ಲಿ ಸರ್ಕಾರ ಅಳಿವಿನ ಅಂಚಿಗೆ ಹೋಗುತ್ತಿದೆ. ನಾವು ಯಾರೂ ಕೂಡ ಇದಕ್ಕೆ ಸೂತ್ರದಾರರು ಅಲ್ಲ ಪಾತ್ರದಾರರು ಅಲ್ಲ, ವೀಕ್ಷಕರೂ ಅಲ್ಲ. ನಾವು ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದೇವೆ ಎಂದರು.
ಅತೃಪ್ತರ ರಾಜೀನಾಮೆ ಪರ್ವಕ್ಕೂ ನಮಗೂ ಸಂಬಂಧವಿಲ್ಲ. ಯಡಿಯೂರಪ್ಪನವರ ಜೊತೆ ನಾವು ಚರ್ಚೆ ಮಾಡುತ್ತಿದ್ದೇವೆ. ರಾಜಕೀಯವಾಗಿ ನಾವು ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಾಳೆ ನಾಡಿದ್ದರಲ್ಲಿ ನಿರ್ಧರಿಸುತ್ತೇವೆ ಎಂದರು.
ಮೈತ್ರಿ ಪಕ್ಷಗಳ ಪಾಪದ ಕರ್ಮವನ್ನು ಅವರು ಅನುಭವಿಸಲಿದ್ದಾರೆ. ಈ ವಿಚಾರದಲ್ಲಿ ನಾವು ಸುಮ್ಮನಿರುತ್ತೇವೆ. ನಮಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಯಡಿಯೂರಪ್ಪನವರು ಬಂದ ನಂತರ ಅವರ ಜೊತೆ ಚರ್ಚೆ ಮಾಡುತ್ತೇವೆ. ಕೇಂದ್ರಕ್ಕೆ ಇಲ್ಲಿ ನಡೆದಿರುವ ಬೆಳವಣಿಗೆಗಳನ್ನು ತಿಳಿಸುತ್ತೇವೆ ಎಂದರು.
ಯುಬಿಸಿಟಿ, ಸಿನಿಮಾ ಮಂದಿರ, ಹೋಟೆಲ್, ಮದುವೆ ಮನೆ, ಕಾರ್ಯಕ್ರಮಗಳ ಉದ್ಘಾಟನೆಗೆ ಯಾರು ಬೇಕಾದರೂ ಹೋಗಬಹುದು. ಸಂತೋಷ್ ಕೂಡ ಅತೃಪ್ತರು ಇದ್ದ ಯುಬಿ ಸಿಟಿಗೆ ಹೋಗಿದ್ದಾರೆ. ಅದು ಕಾಕತಾಳೀಯ ಅಷ್ಟೇ ಎಂದು ಆಪರೇಷನ್ ಕಮಲದಲ್ಲಿ ಸಂತೋಷ್ ಇದ್ದಾರೆ ಎನ್ನುವ ಮಾತನ್ನು ತಳ್ಳಿಹಾಕಿದರು.