ಬೆಂಗಳೂರು:ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಪೋಷಕರು ಮತ್ತು ವಿದ್ಯಾರ್ಥಿಗಳ ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷದ ಪ್ರಥಮ ಪದವಿಪೂರ್ವ ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸಬೇಕೆಂದು ವಿವಿಧ ಜಿಲ್ಲೆಗಳ ಪ್ರಾಚಾರ್ಯರು ಒತ್ತಾಯಿಸಿದ್ದಾರೆ.
ದ್ವಿತೀಯ ಪಿಯು ತರಗತಿಗಳ ಆರಂಭದ ಪ್ರಗತಿ ಕುರಿತು ನಗರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಆಯ್ದ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಗತಿಗಳನ್ನು ತಕ್ಷಣವೇ ಆರಂಭಿಸಬೇಕೆಂದು ಆಗ್ರಹಿಸಿದರು. ಪ್ರಾಚಾರ್ಯರ ಎಲ್ಲಾ ಅಭಿಪ್ರಾಯಗಳನ್ನು ಆಲಿಸಿದ ಸಚಿವರು ತರಗತಿ ಆರಂಭಿಸುವ ಕುರಿತು ತಮ್ಮ ಇಲಾಖೆ ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದರು.
ಈಗಾಗಲೇ ಪದವಿ ತರಗತಿಗಳು ಪೂರ್ಣವಾಗಿ ಆರಂಭವಾಗಿವೆ. ಶಾಲಾರಂಭದ ನಂತರ ತಾವು ಈ ತನಕ ವಿವಿಧ ಜಿಲ್ಲೆಗಳ 150ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದಾಗ ಶಾಲಾರಂಭ ಕುರಿತು ಮಕ್ಕಳು ಮತ್ತು ಪೋಷಕರು ಉತ್ಸುಕರಾಗಿದ್ದು, ಶಾಲೆಗಳ ವಾತಾವರಣ ಮತ್ತು ಸುರಕ್ಷತೆ ಕುರಿತು ಭರವಸೆ ಮೂಡಿರುವುದರಿಂದ ಪ್ರಥಮ ಪಿಯು ಮತ್ತು 8 ಹಾಗೂ 9ನೇ ತರಗತಿಗಳನ್ನು ಆರಂಭಿಸಬೇಕೆಂಬ ಒತ್ತಾಯಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಪರೀಕ್ಷೆಯ ಮೂಲಕವೇ ಪಾಸಾಗಲು ಮಕ್ಕಳ ಇಚ್ಚೆ:
ಶಾಲಾ ತರಗತಿಗಳನ್ನು ಆರಂಭಿಸಲು ಮತ್ತು ಪರೀಕ್ಷೆಯ ಮೂಲಕವೇ ಉತ್ತೀರ್ಣರಾಗಬೇಕೆಂಬುದು ಎಲ್ಲಾ ಮಕ್ಕಳ ಬಯಕೆಯಾಗಿದೆ. ಪರೀಕ್ಷೆಗಳಿಲ್ಲದೆ ಪಾಸಾಗುವುದನ್ನು ಬಹುತೇಕ ವಿದ್ಯಾರ್ಥಿಗಳು ಬಯಸುವುದಿಲ್ಲ. ಪರೀಕ್ಷೆ ಮೂಲಕವೆ ತಮ್ಮ ಸಾಮರ್ಥ್ಯ ಪ್ರಕಟಿಸಬೇಕೆಂಬುದೇ ಪ್ರತಿಯೊಬ್ಬರ ಇಚ್ಛೆಯಾಗಿರುವುದರಿಂದ ಶಾಲೆಗೆ ಭೌತಿಕವಾಗಿ ಹಾಜರಾಗಲು ಮಕ್ಕಳು ಇಚ್ಛಿಸುತ್ತಿದ್ದಾರೆ. ಇದು ನಾನು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದಾದ ಕಂಡುಕೊಂಡ ಸತ್ಯವಾಗಿದೆ ಎಂದು ಸುರೇಶ್ ಕುಮಾರ್ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.
ಶಿಕ್ಷಕರು ಮಕ್ಕಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡಬೇಕು:
ಇದು ಸಂಕಷ್ಟ ಮತ್ತು ಸವಾಲಿನ ಸಮಯವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕಾಗಿದೆ. ಮಕ್ಕಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು, ಪ್ರಾಚಾರ್ಯರು ನಿಗದಿತ ಪಠ್ಯಾಂಶ ಪೂರ್ಣಗೊಳಿಸಲು ಹೆಚ್ಚಿನ ಸಮಯ ನೀಡುವುದರೊಂದಿಗೆ ಮಕ್ಕಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.
ಕೋವಿಡ್‍ನಂತಹ ಆರ್ಥಿಕ ಸಂಕಷ್ಟದ ಸಮಯದಲ್ಲೂ ಸರ್ಕಾರ ಯಾರೊಬ್ಬರಿಗೂ ವೇತನವನ್ನು ಕಡಿಮೆ ಮಾಡಿಲ್ಲ. ಸವಲತ್ತುಗಳನ್ನು ವ್ಯತ್ಯಯ ಮಾಡಿಲ್ಲ. ಹಾಗಾಗಿ ನಾವೆಲ್ಲರೂ ಇಂತಹ ಸವಾಲಿನ ಸಮಯದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಿದೆ. ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಆರಂಭವಾಗಿವೆ. ಈ ಕುರಿತು ಪ್ರಾಚಾರ್ಯರು ಮಕ್ಕಳಿಗೆ ತಿಳಿ ಹೇಳಬೇಕೆಂದರಲ್ಲದೆ ಪ್ರತಿಯೊಬ್ಬ ಪ್ರಾಚಾರ್ಯರಿಂದ ತಮ್ಮ ಕಾಲೇಜಿನ ಪರಿಸ್ಥಿತಿ, ಮಕ್ಕಳ ಹಾಜರಾತಿ, ಕಾಲೇಜು ಆರಂಭದ ಕುರಿತು ಅಭಿಪ್ರಾಯಗಳನ್ನು ಆಲಿಸಿದರು.