ಬೆಂಗಳೂರು:''ಕೈಗಾರಿಕೆಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿಗಾಗಿ ಉತ್ಪಾದನಾ ವಲಯದ ವಿಸ್ತೃತ ಜವಾಬ್ದಾರಿ ಕಾಯ್ದೆ (Extended producer Responsibility act) ಇದ್ದು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಜನಜಾಗೃತಿ ಮೂಡಿಸಲಿದೆ'' ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ದುರಸ್ತಿ, ನವೀಕರಣ ಮತ್ತು ಮರು ಸಂಸ್ಕರಣೆ ಕುರಿತಂತೆ ಕರಡು ಕಾರ್ಯಸೂಚಿ ಸಿದ್ಧಪಡಿಸಲು ಆಯೋಜಿಸಿರುವ ಎರಡು ದಿನಗಳ ರೀ ಕಾಮರ್ಸ್ ಎಕ್ಸ್ ಪೋ-2023 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಕೈಗಾರಿಕೆಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ಮರು ಸಂಸ್ಕರಣೆ ಮಾಡುವುದು ಕೈಗಾರಿಕೆಗಳ ಜವಾಬ್ದಾರಿ. ಈ ಕುರಿತು ಅಸ್ತಿತ್ವದಲ್ಲಿರುವ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಎಲ್ಲಾ ಪಾಲುದಾರರನ್ನು ವಿಶ್ವಾಸಕ್ಕೆ ಪಡೆದು ಅರಿವು ಮೂಡಿಸಲಾಗುವುದು'' ಎಂದರು.
ಇ- ತ್ಯಾಜ್ಯ ನಿವಾರಣೆ ಅತ್ಯಂತ ಮಹತ್ವ:''ಬೆಂಗಳೂರು ಜಾಗತಿಕ ಐಟಿ ರಾಜಧಾನಿಯಾಗಿದ್ದು, ಇಲ್ಲಿ ಉತ್ಪಾದನೆಯಾಗುವ ಇ- ತ್ಯಾಜ್ಯ ನಿವಾರಣೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ, ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಎದುರಾಗಲಿವೆ. ತ್ಯಾಜ್ಯ ವಿಲೇವಾರಿಗಾಗಿ ಉತ್ಪಾದನಾ ವಲಯದ ವಿಸ್ತೃತ ಜವಾಬ್ದಾರಿ ಕಾಯ್ದೆ ಜಾರಿಗೊಳಿಸಿದರೆ, ಇಂತಹ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ದೊರೆಯಲಿದೆ'' ಎಂದು ಅವರು ಹೇಳಿದರು.
ಕರ್ನಾಟಕ ಪರಿಸರ ಸ್ನೇಹಿಯಾಗಿಸಬೇಕು:''ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಬೇಕಾಗಿದ್ದು, ಇದಕ್ಕಾಗಿ ವಿಶೇಷವಾಗಿ ಸಂಸ್ಕರಣಾ ವಲಯದಲ್ಲಿ ಕಾರ್ಯನಿರ್ವಹಿಸಲಿರುವ ಕೈಗಾರಿಕೆಗಳಿಗೆ ಸರ್ಕಾರ ಸೂಕ್ತ ಸಹಕಾರ ಮತ್ತು ನೆರವು ನೀಡಲಿದೆ. ಕರ್ನಾಟಕವನ್ನು ಪರಿಸರ ಸ್ನೇಹಿಯಾಗಿ ಮಾಡುವ ಜೊತೆಗೆ ಈ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಒತ್ತು ನೀಡಲಾಗುವುದು. ಅನೇಕ ಕೈಗಾರಿಕೋದ್ಯಮಗಳು ಒಂದುಗೂಡಿ ರೀ ಕಾಮರ್ಸ್ ಎಕ್ಸ್ ಪೋ ಆಯೋಜಿಸಿರುವುದು ಉತ್ತಮ ಬೆಳವಣಿಗೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.